ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ವನ್ಯಜೀವಿ ವಲಯದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರೀ ಗಾತ್ರದ ಹುಲಿ ಒಂದು ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಅರಣ್ಯ ಇಲಾಖೆ ಹಾಗೂ ಹುಲಿ ಗಣತಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ, ಗಂಗೆಗಿರಿ ಮೀಸಲು ಅರಣ್ಯ ಪ್ರದೇಶದ ಶಿರಗೋಳ ಗ್ರಾಮದ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಎನ್ಟಿಸಿಎ ಮಾರ್ಗಸೂಚಿಯಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಚಿಕ್ಕಮಗಳೂರು ಕ್ಷೇತ್ರ ನಿರ್ದೇಶಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಮೃತಪಟ್ಟಿರುವ ಹುಲಿ ಎಂಟರಿಂದ ಹತ್ತು ವರ್ಷದ ವಯಸ್ಸಿನದಾಗಿದೆ ಎಂದು ತಿಳಿದುಬಂದಿದೆ.
ಮೇಲ್ನೋಟಕ್ಕೆ ಎರಡು ಹುಲಿಗಳು ಪರಸ್ಪರ ಕಾದಾಟ ನಡೆಸಿದ ಪರಿಣಾಮ ಈ ಹುಲಿ ಸಾವನ್ನಪ್ಪಿರುವ ಸಾಧ್ಯತೆ ಕಂಡುಬಂದಿದೆ. ಹುಲಿ ಕಳೇಬರದ ಮೇಲೆ ಎನ್ಟಿಸಿಎ ಸದಸ್ಯರ ಸಮ್ಮುಖದಲ್ಲಿ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಅಗತ್ಯ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ಈ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲು ನಿರ್ಧರಿಸಲಾಗಿದ್ದು, ನಂತರ ನಿಯಮಾನುಸಾರ ಹುಲಿ ಕಳೇಬರವನ್ನು ಸುಟ್ಟು ಹಾಕಲಾಗಿದೆ.
ಹೆಬ್ಬೆ ವಲಯದ ಗಂಗೆಗಿರಿ–ಶಿರಗುಳ ಮೀಸಲು ಅರಣ್ಯ ಪ್ರದೇಶದಲ್ಲಿ ತನ್ನ ಪ್ರದೇಶಕ್ಕಾಗಿ ಎರಡು ಹುಲಿಗಳು ದೊಡ್ಡ ಮಟ್ಟದಲ್ಲಿ ಕಾದಾಟ ನಡೆಸಿದ್ದು, ಈ ಸಂದರ್ಭದಲ್ಲಿ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕಿತ್ ಮೀನಾ ಭೇಟಿ ನೀಡಿ, ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಾನುಸಾರ ಮರಣೋತ್ತರ ಪರೀಕ್ಷೆಗೆ ಆದೇಶ ನೀಡಿದರು.



