ಚಿಕ್ಕಮಗಳೂರು, ಜನವರಿ 07: ತಂದೆ ಎಂದರೆ ರಕ್ಷಕ, ಆದರೆ ಇಲ್ಲಿ ತಂದೆಯೇ ಮಗಳ ಪಾಲಿಗೆ ಅತಿ ದೊಡ್ಡ ಭಕ್ಷಕನಾಗಿ ಪರಿಣಮಿಸಿರುವ ಭೀಕರ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಪತ್ತೆಯಾಗಿದೆ. ಹಣದಾಸೆಗೆ ಅಂಧನಾದ ತಂದೆ, ತನ್ನ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿ, ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರಕ್ಕೆ ಕಾರಣನಾಗಿದ್ದಾನೆ.
ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, PUC ಮುಗಿಸಿದ ಬಳಿಕ ತಂದೆಯ ಬಳಿ ವಾಪಸ್ಸಾಗಿದ್ದಳು. ಡಿಸೆಂಬರ್‌ನಲ್ಲಿ ಅಜ್ಜಿಯ ಮನೆಗೆ ಹೋಗಿ ಬಂದಿದ್ದ ಬಾಲಕಿಗೆ, ಮತ್ತೊಮ್ಮೆ ಅಜ್ಜಿಯಿಂದ ಕರೆ ಬಂದಿದೆ ಎಂದು ನಂಬಿಸಿ ಕರೆದುಕೊಂಡು ಹೋಗಲಾಗಿದೆ. ಆದರೆ ಅದು ದಂಧೆಯ ಮೊದಲ ಹೆಜ್ಜೆಯಾಗಿತ್ತು.
ಅಜ್ಜಿಯ ಮನೆಯಲ್ಲಿ ಪರಿಚಯವಾದ ಭರತ್ ಶೆಟ್ಟಿ ಎಂಬಾತ ತಂದೆ-ಮಗಳೊಂದಿಗೆ ಆತ್ಮೀಯತೆ ಬೆಳೆಸಿ, ತನ್ನ ಮನೆಗೆ ಬಂದು ತಂಗುವಂತೆ ಸೂಚಿಸಿದ್ದಾನೆ. ತಂದೆಯ ಒಪ್ಪಿಗೆಯೊಂದಿಗೆ ಇಬ್ಬರೂ ಭರತ್ ಶೆಟ್ಟಿಯೊಂದಿಗೆ ಮಂಗಳೂರಿಗೆ ತೆರಳಿದ್ದಾರೆ.
ಮಾರ್ಗ ಮಧ್ಯೆ ತಾನು ಮುಟ್ಟಾಗಿರುವುದಾಗಿ ಬಾಲಕಿ ತಂದೆಗೆ ತಿಳಿಸಿದರೂ, ಇದನ್ನೂ ಲೆಕ್ಕಿಸದೆ ಮರುದಿನ ಭರತ್ ಶೆಟ್ಟಿ ಆಕೆಯನ್ನು 4–5 ಜನರೊಂದಿಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. 20 ರಿಂದ 45 ವರ್ಷದ ನಾಲ್ವರು ಪುರುಷರು ಒಬ್ಬರ ನಂತರ ಒಬ್ಬರಂತೆ ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಮರುದಿನವೂ ಇದೇ ದೌರ್ಜನ್ಯ ಪುನರಾವರ್ತನೆಯಾಗಿದೆ.
ಬಾಲಕಿ ಅಪ್ರಾಪ್ತೆ ಎಂದು ಬೇಡಿಕೊಂಡರೂ, “ನಾವು ಭರತ್ ಶೆಟ್ಟಿಗೆ ಹಣ ಕೊಟ್ಟಿದ್ದೇವೆ” ಎಂದು ಹೇಳಿ ಕಾಮುಕರು ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ FIR ದಾಖಲಾಗಿದ್ದು, ಬಾಲಕಿಯ ತಂದೆ, ಅಜ್ಜಿ ಹಾಗೂ ಭರತ್ ಶೆಟ್ಟಿ ಸೇರಿ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ ಈಗಾಗಲೇ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.



