ಹಾವೇರಿ:- ರಾಜಕಾರಣದಲ್ಲಿ ಮುಂದುವರಿಯಲು ಜನರ ಆಶೀರ್ವಾದವೇ ಮುಖ್ಯ. ಜನರ ಆಶೀರ್ವಾದದಿಂದಲೇ ಇಲ್ಲಿಯವರೆಗೆ ಬಂದಿದ್ದೇನೆ. ನನ್ನ ಆಡಳಿತ ಜನತೆಗೆ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಹಾವೇರಿಯ ಕೊಳ್ಳಿ ಪಾಲಿಟೆಕ್ನಿಕ್ ಆವರಣದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹಾವೇರಿ ವೈದ್ಯಕೀಯ ಕಾಲೇಜು ಪೂರ್ಣಗೊಂಡಿದ್ದು, ಇದಕ್ಕೆ ಸುಮಾರು ₹500 ಕೋಟಿ ವೆಚ್ಚವಾಗಿದೆ. ಈ ಕಾಲೇಜಿನ ಘೋಷಣೆಯನ್ನೂ ನಾನೇ ಮಾಡಿದ್ದೆ, ಉದ್ಘಾಟನೆಯನ್ನೂ ನಾನೇ ಮಾಡುತ್ತಿದ್ದೇನೆ. ಈಗಾಗಲೇ ಮೂರನೇ ಬ್ಯಾಚ್ ಆರಂಭವಾಗಿದೆ ಎಂದು ತಿಳಿಸಿದರು. ಸರ್ಕಾರ ಬೊಕ್ಕಸ ಖಾಲಿ ಮಾಡಿದೆ ಎಂಬ ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿದ್ದು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದರು.
ಜಿಎಸ್‌ಟಿ ಜಾರಿಯಿಂದ ರಾಜ್ಯಕ್ಕೆ ಭಾರೀ ನಷ್ಟ:-
ಜಿಎಸ್‌ಟಿ ಜಾರಿಗೆ ತಂದ ನಂತರ ಕಳೆದ ಎಂಟು ವರ್ಷಗಳಲ್ಲಿ 24% ತೆರಿಗೆ ಸಂಗ್ರಹಿಸಿ ಈಗ ತೆರಿಗೆ ಕಡಿಮೆ ಮಾಡಿದ್ದೇವೆ ಎನ್ನಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ವರ್ಷಕ್ಕೆ ₹10–12 ಸಾವಿರ ಕೋಟಿ ನಷ್ಟವಾಗುತ್ತಿದೆ. ಈ ವರ್ಷ ಮಾತ್ರವೇ ₹5–6 ಸಾವಿರ ಕೋಟಿ ನಷ್ಟವಾಗಲಿದೆ.
ನಾವು ಕೇಂದ್ರಕ್ಕೆ ₹4.5 ಲಕ್ಷ ಕೋಟಿ ತೆರಿಗೆ ಕೊಡುತ್ತೇವೆ. ಪ್ರತಿಯಾಗಿ ನಮಗೆ ₹60–70 ಸಾವಿರ ಕೋಟಿ ಮಾತ್ರ ಬರುತ್ತದೆ. ಒಂದು ರೂ ಕೊಟ್ಟರೆ 14 ಪೈಸೆ ಮಾತ್ರ ವಾಪಸ್ಸು ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ವೈದ್ಯಕೀಯ ಕಾಲೇಜನ್ನು ಏಕೆ ಪೂರ್ಣಗೊಳಿಸಲಿಲ್ಲ? ನಾವು ಅಧಿಕಾರಕ್ಕೆ ಬಂದ ಬಳಿಕವೇ ಅದನ್ನು ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.
ಬಳ್ಳಾರಿ ಪ್ರಕರಣ: ಬ್ಯಾನರ್ ಬಿಚ್ಚಿದ್ದು ಪ್ರಚೋದನೆ:-
ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂಬ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಳ್ಳಾರಿಯಲ್ಲಿ ನಡೆದ ಗಲಾಟೆಗೆ ಬ್ಯಾನರ್ ಬಿಚ್ಚಿ ಹಾಕಿದ ಪ್ರಚೋದನೆಯೇ ಕಾರಣ. ಬಿಜೆಪಿಯವರಿಗೆ ಅಸೂಯೆ ತಡೆಯಲು ಆಗುತ್ತಿಲ್ಲ ಎಂದರು.
ಕಾನೂನು ಕೈಗೆತ್ತಿಕೊಂಡರೆ ಕ್ರಮ ಅನಿವಾರ್ಯ:-
ಹುಬ್ಬಳ್ಳಿಯಲ್ಲಿ ಮಹಿಳೆಯ ವಿವಸ್ತ್ರ ಪ್ರಕರಣದ ಕುರಿತು ಮಾತನಾಡಿದ ಅವರು, ಪೊಲೀಸರು ಕರ್ತವ್ಯ ನಿರ್ವಹಿಸುವ ವೇಳೆ ಮಹಿಳೆಯೇ ಸ್ವಯಂ ವಿವಸ್ತ್ರಗೊಂಡು ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.



