ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ
ಜಿಲ್ಲಾ ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಗದಗ, ತಾಲ್ಲೂಕು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ನರಗುಂದ ಮತ್ತು ಗ್ರಾಮ ಪಂಚಾಯತಿ ಚಿಕ್ಕನರಗುಂದ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ನರಗುಂದ ನ್ಯಾಯಾಲಯದ ನ್ಯಾಯಾಧೀಶೆ ಸಲ್ಮಾ ಎಸ್. ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಇದೆ. ನಮ್ಮ ದೈನಂದಿನ ಜೀವನ ಯಾವುದೇ ಅಡೆತಡೆಯಿಲ್ಲದೆ ನೆಮ್ಮದಿಯಿಂದ ಸಾಗಲು ಅಲ್ಪ ಪ್ರಮಾಣದಲ್ಲಾದರೂ ಕಾನೂನು ಜ್ಞಾನ ಪಡೆಯಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಆರ್ಥಿಕವಾಗಿ ತೊಂದರೆಗೊಳಗಾದವರಿಗೆ ಉಚಿತ ಕಾನೂನು ನೆರವು ನೀಡಲಾಗುವುದು ಎಂದು ಹೇಳಿದರು.

ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು, ಬಾಲ್ಯ ವಿವಾಹ ನಿಷೇಧ ಹಾಗೂ ಬಾಲ ಕಾರ್ಮಿಕರಿಗೆ ಸಂಬಂಧಿಸಿದ ಕಾಯ್ದೆಯ ಬಗ್ಗೆ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಕುರಿತು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ಜನಸಾಮಾನ್ಯರಿಗೆ ಕಾನೂನು ಅರಿವು, ನೆರವು ಮತ್ತು ಪಂಚಾಯಿತಿಯಲ್ಲಿ ಸಿಗುವ ಕಾನೂನಾತ್ಮಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಇದರ ಸದುಪಯೋಗ ಪಡೆಯಬೇಕು ಎಂದರು.

ನ್ಯಾಯವಾದಿಗಳಾದ ಎಂ.ಬಿ. ಕುಲಕರ್ಣಿ, ಮೋಟಾರು ವಾಹನ ಕಾಯ್ದೆ ಹಾಗೂ ಬಾಲ ಕಾರ್ಮಿಕರ ನಿಷೇಧ ಕಾಯ್ದೆ ಕುರಿತು, ಕೆ.ಎಸ್. ಹೂಲಿ, ಉಚಿತ ಕಾನೂನು ನೆರವು ಅರಿವು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ, ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು, ಆರ್. ಆರ್. ನಾಯ್ಕರ್, ದಿನನಿತ್ಯದ ಕಾನೂನುಗಳು ಹಾಗೂ ಜೀವನಾಂಶದ ಕಾನೂನು ಕುರಿತು, ಪ್ರಭಾರಿ ಪಿಎಸ್ಐ ಪವಾರ, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸುವ ಹಾಗೂ ಸ್ವಿಕರಿಸುವ ಬಗ್ಗೆ ಮೋಟಾರು ವಾಹನ ಕಾಯ್ದೆ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಬಾಪು ಹಿರೇಗೌಡ್ರ, ಲಕ್ಷ್ಮಣ ಕಂಬಳಿ, ಶರಣಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಗ್ರಾಪಂ ಕಾರ್ಯದರ್ಶಿ ಕೆಂಚಪ್ಪ ಮಾದರ, ಕ್ಲರ್ಕ್ ಶಿವು ಯಲಿಗಾರ, ಆಶಾ,ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ನ್ಯಾಯವಾದಿ ಎಸ್.ಕೆ. ಹರಪನಹಳ್ಳಿ ಸ್ವಾಗತಿಸಿ, ನಿರೂಪಿಸಿದರು.