ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ಪತ್ರಕರ್ತ ಅನಂತ ಕಾರ್ಕಳ ಪುತ್ರಿ ಸಹನಾ ಎಲ್‌ಎಲ್‌ಎಂನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಗೋಲ್ಡ್ ಮೆಡಲ್ ಪಡೆದ ಹಿನ್ನೆಲೆಯಲ್ಲಿ ಗದಗ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾನಿಪ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜ್ಯ ರಾಜು ಹೆಬ್ಬಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹನಾ ಅವರ ಸಾಧನೆ ಇಡೀ ಪತ್ರಕರ್ತ ಬಳಗಕ್ಕೆ ಸಂತಸ ತಂದಿದೆ. ಸಹನಾ ನಮ್ಮ ಮನೆ ಮಗಳಾಗಿ ಈ ಸಾಧನೆ ಮಾಡಿದ್ದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹನಾ ಅನಂತ ಕಾರ್ಕಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸುತ್ತಿರುವುದು ಖುಷಿ ತಂದಿದೆ. ಎಲ್ಲಾ ಪತ್ರಕರ್ತರ ಮಕ್ಕಳೂ ಸಾಧನೆ ಮಾಡಬೇಕು, ಪ್ರತಿ ವರ್ಷ ಸಾಧನೆ ಮಾಡಿದ ಎಲ್ಲರಿಗೂ ಸನ್ಮಾನ ಮಾಡಬೇಕೆಂದರು.
ಹಿರಿಯ ಪತ್ರಕರ್ತ ಜಗದೀಶ ಕುಲಕರ್ಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹನಾ ತಾಯಿ ಮಂಗಳಾ ಅನಂತ ಕಾರ್ಕಳ, ನ್ಯಾಯವಾದಿ ಟಿ.ಎನ್. ಭಾಂಡಗೆ, ಹಿರಿಯ ಪತ್ರಕರ್ತರಾದ ಆನಂದ ಸಾಲಿಗ್ರಾಮ, ಎಚ್.ಎಂ. ಶರೀಫನವರ, ಗಣೇಶ ಪೈ, ಸಂಜೀವಕುಮಾರ ಪಾಂಡ್ರೆ, ಪತ್ರಕರ್ತರಾದ ಸಂತೋಷ ಕೊಣ್ಣೂರ, ಸುರೇಶ ಕಡ್ಲಿಮಟ್ಟಿ, ನಿಂಗನಗೌಡ, ಕ್ಯಾಮರಾಮನ್ ವಿಜಯ್ ಕಾಗನೂರಮಠ, ಮಂಜುನಾಥ ಸಾಳೇರ, ಗಣೇಶ ದೊಡ್ಡಮನಿ ಮುಂತಾದವರಿದ್ದರು.
ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಸ್ವಾಗತಿಸಿದರು. ಹಿರಿಯ ಪತ್ರಕರ್ತ, ಕಾನಿಪ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅರುಣಕುಮಾರ ಹಿರೇಮಠ ವಂದಿಸಿದರು.
ಹಿರಿಯ ಪತ್ರಕರ್ತ ಅನಂತ ಕಾರ್ಕಳ ಮಾತನಾಡಿ, ಎಲ್‌ಎಲ್‌ಬಿ ಪಾಸಾಗುವುದೇ ಇಂದಿನ ದಿನದಲ್ಲಿ ಕಷ್ಟಕರವಾಗಿರುವಾಗ, ಎಲ್‌ಎಲ್‌ಎಂನಲ್ಲಿ ನನ್ನ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಗೋಲ್ಡ್ ಮೆಡಲ್ ಪಡೆದಿರುವುದು ನಿಜಕ್ಕೂ ಸಾಧನೆಯೇ ಸರಿ. ಇಂತಹ ಸಾಧನೆ ಮಾಡಿದ ಪುತ್ರಿ ಸಹನಾಗೆ ಕಾನಿಪದಿಂದ ಸನ್ಮಾನ ಸಮಾರಂಭ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಪತ್ರಕರ್ತರ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾದರಿಯಾಗಿದೆ ಎಂದರು.



