ಗದಗ:- ಜಿಲ್ಲೆಯ ಪಾಪನಾಶಿ ಟೋಲ್ ನಾಕಾ ಬಳಿ ಸರ್ಕಾರಿ ಬಸ್‌ನಲ್ಲಿ ಹತ್ತಿದ್ದ ಬಾಲಕಿಯನ್ನು ಇಳಿಸಿದ್ದಕ್ಕೆ ಕೋಪಗೊಂಡ ತಂದೆ ಹಾಗೂ ಇನ್ನೊಬ್ಬ ವ್ಯಕ್ತಿ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗದಗ ಜಿಲ್ಲಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆಯು ಜನವರಿ 6, 2026ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ನಡೆದಿತ್ತು. NWKRTCಗೆ ಸೇರಿದ KA-26 F-0852 ನಂಬರ್ ಬಸ್‌ನ ಮಹಿಳಾ ಕಂಡಕ್ಟರ್ ನೇತ್ರಾವತಿ ಗಂಡ ಮಹಾಂತೇಶ ಪತ್ರಿಮಠ (ವಯಸ್ಸು 46) ಅವರು ಟೋಲ್ ನಾಕಾ ಬಳಿ ಬಸ್ ನಿಲ್ಲಿಸಲು ಅವಕಾಶವಿಲ್ಲದ ಕಾರಣ ವಿದ್ಯಾರ್ಥಿನಿಯೊಬ್ಬಳನ್ನು ಹತ್ತಿಸದೇ ಕೆಳಗಿಳಿಸಿದ್ದರು.
ಇದರಿಂದ ಕೋಪಗೊಂಡ ಆಕೆಯ ತಂದೆ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ಪ್ರಕಾಶ ಲಕ್ಷ್ಮಣ ಸಂಕಣ್ಣವರ ಹಾಗೂ ಶಿಂಗಟರಾಯನಕೇರಿಯ ನೀಲಪ್ಪ @ ಮುತ್ತಣ್ಣ ಹುಚ್ಚಪ್ಪ ಜಂತ್ಲಿ ಇಬ್ಬರು, ಮಹಿಳಾ ಕಂಡಕ್ಟರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಹಲ್ಲೆಗೊಳಗಾದ ನೇತ್ರಾವತಿ ಅವರು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಗದಗ ಗ್ರಾಮೀಣ ಪೊಲೀಸರು, ತ್ವರಿತ ಕ್ರಮ ಕೈಗೊಂಡು ಆರೋಪಿಗಳಾದ ಪ್ರಕಾಶ ಸಂಕಣ್ಣವರ ಹಾಗೂ ನೀಲಪ್ಪ ಜಂತ್ಲಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



