ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ (83) ಅವರು ಬುಧವಾರ ರಾತ್ರಿ ಪುಣೆಯಲ್ಲಿ ನಿಧನರಾದರು.
ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿದ್ದ ಅವರು, 2010ರಲ್ಲಿ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದು, ಅವರ ಅಧ್ಯಯನ ಆಧಾರಿತ ವರದಿ ‘ಗಾಡ್ಗೀಳ್ ಆಯೋಗದ ವರದಿ’ ಎಂದು ಪ್ರಸಿದ್ಧಿಯಾಯಿತು.
1942ರ ಮೇ 24ರಂದು ಪುಣೆಯಲ್ಲಿ ಜನಿಸಿದ ಡಾ. ಗಾಡ್ಗೀಳ್ ಅವರು ಫರ್ಗುಸನ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಮತ್ತು ಪಿಎಚ್‌ಡಿ ಪಡೆದಿದ್ದರು. 1971ರಲ್ಲಿ ಭಾರತಕ್ಕೆ ಮರಳಿ, 1973ರಿಂದ 2004ರವರೆಗೆ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ್ದರು. ಜೊತೆಗೆ NCERT, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ವಿಜ್ಞಾನ ಕ್ಷೇತ್ರದ ಜೊತೆಗೆ ಕ್ರೀಡಾರಂಗದಲ್ಲೂ ಸಾಧನೆ ಮಾಡಿದ್ದ ಅವರು, ಹೈಜಂಪ್‌ನಲ್ಲಿ ಮಹತ್ವದ ದಾಖಲೆಗಳನ್ನು ನಿರ್ಮಿಸಿದ್ದರು ಇದೀಗ ಅವರ ನಿಧನಕ್ಕೆ ಹಲವು ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.



