ಬೆಂಗಳೂರು: ನ್ಯಾಷನಲ್ ಹೆರಾಲ್ಡ್‍ಗೆ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳಿಗಿಂತ ಜಾಸ್ತಿ ದುಡ್ಡನ್ನು ಕಾಂಗ್ರೆಸ್ ಕೊಟ್ಟಿದೆ. ಇದು ಕಾಂಗ್ರೆಸ್ ಸರಕಾರದ ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ನ್ಯಾಷನಲ್ ಹೆರಾಲ್ಡ್‍ಗೆ 2023-24ರಲ್ಲಿ 1.9 ಕೋಟಿ ಮೊತ್ತವನ್ನು ಕೊಡಲಾಗಿದೆ. 2024-25ರಲ್ಲಿ ಸುಮಾರು 1 ಕೋಟಿಯನ್ನು ಮಂಜೂರು ಮಾಡಿದ್ದಾರೆ. ಈ ಪತ್ರಿಕೆಯ ವಿಚಾರ ಹಗರಣವಾಗಿ, ಕೋರ್ಟಿನಲ್ಲಿದೆ ಎಂದು ಗಮನ ಸೆಳೆದರು.
ಇದರ ತಥಾಕಥಿತ ಟ್ರಸ್ಟಿಗಳು, ಎನ್‍ಜಿಒಗಳು, ಮಾಲೀಕರಲ್ಲಿ ತಾಯಿ- ಮಗ ಜಾಮೀನಿನಲ್ಲಿದ್ದಾರೆ. ಇದರ ಪ್ರಸಾರ ಸಂಖ್ಯೆ ಬಹುತೇಕ ಶೂನ್ಯವಾಗಿದೆ. ಅದಕ್ಕೆ ಇಷ್ಟು ದುಡ್ಡು ಕೊಟ್ಟಿದ್ದು, ಇದು ನೇರವಾಗಿ ಒಂದು ರೀತಿಯಲ್ಲಿ ಗಾಂಧಿ ಕುಟುಂಬಕ್ಕೆ ಕರ್ನಾಟಕ ಸರಕಾರದಿಂದ ದಾನ ಕೊಟ್ಟು ಸಂಪ್ರೀತಗೊಳಿಸುವ ಪ್ರಕ್ರಿಯೆ ಎಂದು ಆರೋಪಿಸಿದರು.



