ರಾಮನಗರ: ಸಿದ್ದರಾಮಯ್ಯ ಅವರ ಅಗತ್ಯ ಈ ರಾಜ್ಯಕ್ಕೆ ಇದೆ. ಮುಂದಿನ ಚುನಾವಣೆಯೂ ಅವರ ಮಾರ್ಗದರ್ಶನದಲ್ಲೇ ನಡೆಯಬೇಕು ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರವಾಗಿ ಮಾಗಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಕಾಂಗ್ರೆಸ್ ಹೈಕಮಾಂಡ್‌ನ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು. ನಾನಾಗಲಿ ಅಥವಾ ಶಾಸಕರಾಗಲಿ ಮುಖ್ಯಮಂತ್ರಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಸಿದ್ದರಾಮಯ್ಯ ಮುಂದುವರೆಯಬೇಕಾ ಅಥವಾ ಡಿಕೆಶಿಗೆ ಅವಕಾಶ ನೀಡಬೇಕಾ ಎಂಬುದನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.
ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರನ್ನೂ ಒಳಗೊಂಡ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ನೀಡಿದೆ. ಪಕ್ಷಕ್ಕೆ ಬಂದ ನಂತರ ಅವರು ಮುಖ್ಯಮಂತ್ರಿ, ವಿಪಕ್ಷ ನಾಯಕರಾಗಿದ್ದಾರೆ.
ಈಗ ಅವರು ನಮ್ಮ ಮನೆ ಯಜಮಾನ ಮತ್ತು ಪ್ರಶ್ನಾತೀತ ನಾಯಕ ಎಂದು ಬಣ್ಣಿಸಿದರು. ಅವರಿಗೆ ತಕ್ಷಣವೇ ಸ್ಥಾನ ಕೊಡಬೇಕು ಅಥವಾ ದಿನಾಂಕ ನಿಗದಿಪಡಿಸಬೇಕು ಎಂದು ಕೇಳಲಾಗುವುದಿಲ್ಲ. ಆದರೆ ಒಳ್ಳೆಯ ನಾಯಕತ್ವದ ಆಧಾರದ ಮೇಲೆ ಅವರಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈ ನಿರ್ಧಾರ ಪಕ್ಷದ ಸಂಘಟನೆಗೆ ಅನುಕೂಲಕರವಾಗಲಿದೆ ಎಂದು ಹೆಚ್.ಸಿ. ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.



