ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಇದೀಗ ಜಾಗತಿಕ ವೇದಿಕೆಯಲ್ಲಿ ದೊಡ್ಡ ಗುರುತನ್ನು ಪಡೆಯುವ ಹಾದಿಯಲ್ಲಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್ಗೆ ಪ್ರವೇಶ ಪಡೆದಿದ್ದು, ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ಹಾಲಿವುಡ್ ನಿರ್ಮಾಣಗಳ ಜೊತೆ ಸ್ಪರ್ಧೆ ನಡೆಸಲಿದೆ. ಇದು ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾ ಅಲ್ಲವಾದರೂ, ಪ್ರತ್ಯೇಕ ಅರ್ಜಿ ಸಲ್ಲಿಕೆ ಮೂಲಕ ರೇಸ್ನಲ್ಲಿ ಸ್ಥಾನ ಪಡೆದುಕೊಂಡಿದೆ.
‘ಕಾಂತಾರ’ ಚಿತ್ರದ ಅಪಾರ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ನಿರ್ದೇಶಿಸಿದ ‘ಕಾಂತಾರ: ಚಾಪ್ಟರ್ 1’ ಪ್ರೇಕ್ಷಕರನ್ನು ಮತ್ತೆ ಸೆಳೆದಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 850 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆಸಿದ್ದು, ಒಟಿಟಿ ವೇದಿಕೆಗಳಲ್ಲಿಯೂ ಯಶಸ್ವಿ ಪ್ರದರ್ಶನ ಕಂಡಿದೆ. ಜನರ ಮೆಚ್ಚುಗೆ ಹಾಗೂ ವಾಣಿಜ್ಯ ಯಶಸ್ಸು ಈ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ಇದೇ ಬ್ಯಾನರ್ನ ‘ಮಹಾವತಾರ ನರಸಿಂಹ’ ಚಿತ್ರವೂ ಸಾಮಾನ್ಯ ಪ್ರವೇಶ ಪಟ್ಟಿಯ ಮೂಲಕ ಆಸ್ಕರ್ ರೇಸ್ಗೆ ಸೇರಿದೆ. ಹಲವು ಹಂತಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಈ ಎರಡು ಚಿತ್ರಗಳಲ್ಲಿ ಯಾವುದಾದರೂ ಅಂತಿಮವಾಗಿ ಆಸ್ಕರ್ ಗೆಲುವು ಸಾಧಿಸಬಹುದೇ ಎಂಬ ನಿರೀಕ್ಷೆ ಸಿನಿಪ್ರೇಮಿಗಳಲ್ಲಿ ಮೂಡಿದೆ.
ಈವರೆಗೆ ಭಾರತದಲ್ಲಿ ನಿರ್ಮಾಣವಾದ ಯಾವುದೇ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. ಆದರೆ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು…’ ಹಾಡು ಆಸ್ಕರ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಆ ಹಾಡು ಕೂಡ ಪ್ರತ್ಯೇಕ ಅರ್ಜಿ ಸಲ್ಲಿಕೆ ಮೂಲಕವೇ ರೇಸ್ಗೆ ಪ್ರವೇಶ ಪಡೆದಿತ್ತು. ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಕಾಣಿಸಿಕೊಂಡಿದ್ದಾರೆ.



