ಬೆಂಗಳೂರು: ಕಳೆದ ವರ್ಷ ನಡೆದ ವೈದ್ಯ ಪತಿಯಿಂದಲೇ ಪತ್ನಿ ಕೃತಿಕಾ ರೆಡ್ಡಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೂರ್ಣಗೊಳಿಸಿರುವ ಮಾರತಹಳ್ಳಿ ಪೊಲೀಸರು, ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅಂತಿಮ ಸಿದ್ಧತೆ ನಡೆಸಿದ್ದಾರೆ.
ವೈದ್ಯೆ ಕೃತಿಕಾ ರೆಡ್ಡಿ ಪತಿ, ವೈದ್ಯ ಮಹೇಂದ್ರ ರೆಡ್ಡಿ ವಿರುದ್ಧ ಪೊಲೀಸರು ಚಾರ್ಜ್ಶೀಟ್ ಸಿದ್ಧಪಡಿಸಿದ್ದು, ಸುಮಾರು 1200 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು ಇಂದು ಎಸಿಜೆಎಂ ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.
ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಗಳು, ಎಫ್ಎಸ್ಎಲ್ ವರದಿಗಳು ಸೇರಿದಂತೆ ಒಟ್ಟು 72ಕ್ಕೂ ಹೆಚ್ಚು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿ ಚಾರ್ಜ್ಶೀಟ್ನಲ್ಲಿ ದಾಖಲಿಸಿದ್ದಾರೆ. ಡಿಜಿಟಲ್ ಸಾಕ್ಷ್ಯಗಳು, ವೈದ್ಯಕೀಯ ದಾಖಲೆಗಳು ಹಾಗೂ ತಾಂತ್ರಿಕ ಮತ್ತು ಎಫ್ಎಸ್ಎಲ್ ವರದಿಗಳ ಆಧಾರದ ಮೇಲೆ ಮಹೇಂದ್ರ ರೆಡ್ಡಿಯನ್ನು ಆರೋಪಿಯಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಹೇಂದ್ರ ರೆಡ್ಡಿ ಅನೆಸ್ತೇಷಿಯಾ ಔಷಧ ಖರೀದಿಸಿದ ವಿವರಗಳು, ಮೆಡಿಕಲ್ ಸ್ಟೋರ್ಗೆ ತೆರಳಿ ಮರಳಿದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಯುಪಿಐ (UPI) ಮೂಲಕ ಹಣ ಪಾವತಿ ಮಾಡಿದ ದಾಖಲೆಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ. ಇದರೊಂದಿಗೆ, ಮಹೇಂದ್ರ ರೆಡ್ಡಿ ತನ್ನ ಸ್ನೇಹಿತೆಯೊಂದಿಗೆ ನಡೆಸಿದ್ದ ಫೋನ್ ಚಾಟಿಂಗ್ ವಿವರಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದು, ಅವುಗಳಲ್ಲಿ ಪ್ರಮುಖ ಎಂಟು ಸಂದೇಶಗಳಲ್ಲಿ ಕೊಲೆಯ ರಹಸ್ಯ ಅಡಗಿದ್ದುದಾಗಿ ತಿಳಿಸಿದ್ದಾರೆ.
ಕೊಲೆ ನಡೆದ ಒಂದೂವರೆ ತಿಂಗಳ ನಂತರವೂ ಸತ್ಯವನ್ನು ಮರೆಮಾಚಲಾಗದೆ, ಮಹೇಂದ್ರ ರೆಡ್ಡಿ ತನ್ನ ಸ್ನೇಹಿತೆಯೊಂದಿಗೆ ನಡೆಸಿದ ಫೋನ್ ಚಾಟಿಂಗ್ನಲ್ಲಿ ಕೊಲೆಯ ಕುರಿತು ಬಿಚ್ಚಿಟ್ಟಿರುವ ಅಂಶಗಳನ್ನು ಚಾರ್ಜ್ಶೀಟ್ನಲ್ಲಿ ಸೇರಿಸಲಾಗಿದೆ ಎಂದು ಮಾರತಹಳ್ಳಿ ಪೊಲೀಸರು ಮಾಹಿತಿ ನೀಡಿದ್ದಾರೆ.



