ಚಿಕ್ಕಮಗಳೂರು: ಜಿಲ್ಲೆಯ ಕಾಂಗ್ರೆಸ್ ಘಟಕದಲ್ಲಿ ಆಂತರಿಕ ಅಸಮಾಧಾನ ತೀವ್ರಗೊಂಡಿರುವ ಸೂಚನೆ ದೊರೆತಿದ್ದು, ಪಕ್ಷದ ಹಿರಿಯ ನಾಯಕ ಎಂ.ಎಲ್. ಮೂರ್ತಿ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಮೂರ್ತಿ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಹುದ್ದೆ ಸೇರಿದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.
ಸುಮಾರು ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಎಂ.ಎಲ್. ಮೂರ್ತಿ, ಜಿಲ್ಲಾ ಅಧ್ಯಕ್ಷ ಹಾಗೂ ಸಿಡಿಎ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೂ ತಮ್ಮನ್ನು ಯಾವುದೇ ಹುದ್ದೆಗೆ ಪರಿಗಣಿಸದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದರೂ, ನಾಯಕರ ನಡುವೆ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಮೂರ್ತಿಯವರ ರಾಜೀನಾಮೆ, ಪಕ್ಷದ ಒಳಗಿನ ಭಿನ್ನಮತ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಬಹುದೆಂಬ ಸೂಚನೆ ನೀಡಿದೆ. ಇದು ಕಾಫಿನಾಡ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆಯಂತೆ ಪರಿಣಮಿಸಿದೆ.



