ಹುಬ್ಬಳ್ಳಿ: ಇತ್ತೀಚೆಗೆ ವಿವಸ್ತ್ರ ಪ್ರಕರಣದ ಮೂಲಕ ಸುದ್ದಿಯಾಗಿದ್ದ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಗೆ ಸಂಬಂಧಿಸಿದ ಹಳೆಯ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹಣಕ್ಕಾಗಿ ಹನಿಟ್ರ್ಯಾಪ್ ನಡೆಸಿ ವ್ಯಕ್ತಿಯನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿವೆ.
ಕಳೆದ ನವೆಂಬರ್ 12, 2023ರಂದು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸುಜಾತಾ ಹಂಡಿ ಹಾಗೂ ಆಕೆಯ ಸಹಚರರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿತ್ತು. ಧಾರವಾಡ ತಾಲ್ಲೂಕಿನ ತುಕಾರಾಮ್ ಎಂಬ ವ್ಯಕ್ತಿಯನ್ನು ಹನಿಟ್ರ್ಯಾಪ್ ಮೂಲಕ ಕರೆಸಿಕೊಂಡು, ನಾಲ್ಕು ದಿನಗಳ ಕಾಲ ಅಕ್ರಮವಾಗಿ ಕೂಡಿಹಾಕಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವೇಳೆ ನೈಲಾನ್ ಹಗ್ಗ ಹಾಗೂ ಲಾಂಗ್ ಬಳಸಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಬಿಡುಗಡೆ ಮಾಡಿದ್ದು, ಅದರಲ್ಲಿ ಹಲ್ಲೆಯ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಹಲ್ಲೆಗೊಳಗಾದ ವ್ಯಕ್ತಿ ಕರುಣೆಗೆ ಮೊರೆಯಿಟ್ಟರೂ ಹಲ್ಲೆ ಮುಂದುವರೆದಿದೆ ಎನ್ನಲಾಗಿದೆ. ತನಿಖೆಯ ವೇಳೆ ಈ ಪ್ರಕರಣದಲ್ಲಿ ಬರೋಬ್ಬರಿ 1.84 ಲಕ್ಷ ರೂಪಾಯಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಈ ಹಿಂದೆ ಪೊಲೀಸರು ಸುಜಾತಾ ಹಂಡಿ ಹಾಗೂ ಆಕೆಯ ಸಹಚರರನ್ನು ಬಂಧಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಾಜಕೀಯ ಹಿನ್ನೆಲೆ ಹೊಂದಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.



