ಬೆಂಗಳೂರು:- ನಗರದ ಕೊತ್ತನೂರಿನ ವಿಧಾನಸೌಧ ಲೇಔಟ್‌ನಲ್ಲಿ ಡೆಲಿವರಿ ಬಾಯ್ ಓರ್ವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ತಬ್ಬಿ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಮನೆಯ ಮುಂದೆ ಬಿದ್ದಿದ್ದ ಬಾಕ್ಸ್ ಅನ್ನು ಯುವತಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ, ಆರೋಪಿಯು ರಸ್ತೆಯಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿ ಯುವತಿಯನ್ನು ಕರೆಯುತ್ತಿದ್ದಾನೆ. ಬಳಿಕ ಯುವತಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ತಬ್ಬಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಯುವತಿಯ ಕೆನ್ನೆಗೆ ಹೊಡೆದಿದ್ದಾನೆ.
ಯುವತಿ ಕಿರುಚಾಡುತ್ತಿದ್ದಂತೆ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಕುರಿತು ಕೊತ್ತನೂರು ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ



