ಬೆಂಗಳೂರು:- ಕರ್ನಾಟಕದಲ್ಲಿ ಚಳಿ ತೀವ್ರವಾಗಿದ್ದು, ಇದರ ಪರಿಣಾಮವಾಗಿ ಕೋಳಿ ಮಾಂಸ ಹಾಗೂ ಮೊಟ್ಟೆಯ ದರದಲ್ಲಿ ಏರಿಕೆ ಕಂಡುಬಂದಿದೆ.
ಶೀತ ವಾತಾವರಣದಿಂದ ಕೋಳಿಗಳು ಮೊಟ್ಟೆ ಇಡುವ ಪ್ರಮಾಣ ಕಡಿಮೆಯಾಗಿದ್ದು, ಕೋಳಿ ಫಾರಂಗಳಲ್ಲಿ ಬೆಳವಣಿಗೆಯ ಮೇಲೂ ದುಷ್ಪರಿಣಾಮ ಉಂಟಾಗಿದೆ. ಸಾಮಾನ್ಯವಾಗಿ 2.2 ಕೆಜಿ ತೂಕ ಬರಬೇಕಾದ ಕೋಳಿ ಸದ್ಯ 1.8 ಕೆಜಿಗೆ ಸೀಮಿತವಾಗುತ್ತಿದ್ದು, ತಿಂಗಳಿಗೆ 28ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು ಈಗ 22ರಿಂದ 24 ಮೊಟ್ಟೆ ಮಾತ್ರ ಇಡುತ್ತಿವೆ.
ಚಳಿಗಾಲದಲ್ಲಿ ಸೂರ್ಯನ ಬೆಳಕು ಹಾಗೂ ಬಿಸಿಲಿನ ಕೊರತೆಯಿಂದ ಕೋಳಿಗಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಫಾರಂ ಮಾಲೀಕರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಚಿಕನ್ ಬೆಲೆ ಕೆಜಿಗೆ 280ರಿಂದ 300 ರೂಪಾಯಿಗೆ ಏರಿಕೆಯಾಗಿ, ಮೊಟ್ಟೆಯ ದರದಲ್ಲೂ ಹೆಚ್ಚಳವಾಗಿದೆ. ಬೆಲೆ ಏರಿಕೆಯ ಹೊಡೆತದಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದು, ಮಾರುಕಟ್ಟೆಯಲ್ಲಿ ಚಿಕನ್ ಮತ್ತು ಮೊಟ್ಟೆ ಬೇಡಿಕೆ ಕುಸಿತ ಕಂಡುಬಂದಿದೆ.



