ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಾನಪದ ಸಾಹಿತ್ಯ ಶಿಷ್ಟ ಸಾಹಿತ್ಯಕ್ಕೆ ತಾಯಿಯಿದ್ದಂತೆ. ನಮ್ಮ ಜನಪದರು ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆಯದಿದ್ದರೂ ಜಾನಪದ ಹಾಡುಗಳನ್ನು ರಚಿಸಿ ನಮ್ಮ ಜನಪದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಹಮ್ಮಿಕೊಂಡಿದ್ದ ಡಾ. ಬಿ.ಎಸ್. ಗದ್ದಗಿಮಠ ಸಂಸ್ಮರಣೆ ದತ್ತಿ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ತಜ್ಞ ಹಾಗೂ ಕನ್ನಡ ಜಾನಪದ ಕಲಾವಿದೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ಸಾಹಿತ್ಯ ನಮ್ಮ ಜನಪದರು ನಮಗಾಗಿ ಬಿಟ್ಟುಹೋದ ದೊಡ್ಡ ಆಸ್ತಿ. ಆದರೆ ಇಂದಿನ ಯುವಕರು, ವಿದ್ಯಾರ್ಥಿಗಳಿಗೆ ಜಾನಪದ ಎಂದರೇನು, ಜಾನಪದ ಪರಿಕರಗಳ ಬಗ್ಗೆ ಪರಿಜ್ಞಾನವಿಲ್ಲದಿರುವುದು ವಿಷಾದನೀಯ. ಜಾನಪದ ಉಳಿಯಬೇಕು ಎಂದು ಮಾತಿನಿಂದ ಹೇಳಿದರೆ ಸಾಲದು. ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದಾಗ ಮೈಸೂರು ರಸ್ತೆ ರಾಮನಗರದ ಬಳಿ ಜಾನಪದ ಲೋಕ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹೇರಿ 12 ಎಕರೆ ಜಮೀನು ಮಂಜೂರಿ ಮಾಡಿಸಿ ಅಲ್ಲಿ ಜನಪದರು ಉಪಯೋಗಿಸುತ್ತಿದ್ದ ಪರಿಕರ ಪ್ರದರ್ಶನಕ್ಕೆ ಅನುಕೂಲಿಸಿದ್ದೇನೆ. ನಾವು ಹೇಗೆ ಬದುಕಬೇಕೆಂಬುದನ್ನು ಕಲಿಸಲು ಯಾವ ಪಠ್ಯ ಹಾಗೂ ವಿಶ್ವವಿದ್ಯಾಲಯದ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಕ.ವಿ.ವಿ ಕುಲಪತಿ ಡಾ. ಎ.ಎಮ್. ಖಾನ್ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ ಜಾನಪದ ವಿಭಾಗಕ್ಕೆ ವಿಶೇಷ ಮಾನ್ಯತೆ ತಂದುಕೊಟ್ಟವರೇ ಡಾ. ಬಿ.ಎಸ್. ಗದ್ದಗಿಮಠ ಎಂದು ಹೇಳಿದರು. `ಜಾನಪದ ಜೀವ-ಜೀವಾಳ ಡಾ. ಬಿ.ಎಸ್. ಗದ್ದಗಿಮಠ’ ವಿಷಯದ ಕುರಿತು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಕೆ. ಖಂಡೋಬಾ ಉಪನ್ಯಾಸ ನೀಡಿದರು.
ನೀಲಗಂಗಾ ಚರಂತಿಮಠ ಪ್ರಶಸ್ತಿ ಸ್ವೀಕರಿಸಿ, ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು. ಡಾ. ಸಂಜೀವ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆ ಮೇಲೆ ಸತೀಶ ತುರಮರಿ ಉಪಸ್ಥಿತರಿದ್ದರು. ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಡಾ. ತೇಜಸ್ವಿನಿ ಕಟ್ಟಿಮನಿ, ಡಾ. ಡಿ.ಎಂ. ಹಿರೇಮಠ, ಪ್ರೊ. ಐ.ಜಿ. ಸನದಿ, ಪ್ರೊ. ಸಿ.ಆರ್. ಯರವಿನತೆಲಿಮಠ, ಡಾ. ಅರವಿಂದ ಯಾಳಗಿ, ಡಾ. ಪ್ರಜ್ಞಾ ಮತ್ತಿಹಳ್ಳಿ, ಎಂ.ಎಂ. ಚಿಕ್ಕಮಠ, ಡಾ. ಪಾರ್ವತಿ ಹಾಲಭಾವಿ, ಡಾ. ಮಲ್ಲಿಕಾರ್ಜುನ ಪಾಟೀಲ ಮುಂತಾದವರಿದ್ದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಪುಲಕೇಶಿ ಗದ್ದಗಿಮಠ ಪ್ರಾಸ್ತಾವಿಸಿದರು. ಶಂಕರ ಕುಂಬಿ ನಿರೂಪಿಸಿದರು. ನಿಜಗುಣಿ ಗದ್ದಗಿಮಠ, ಉಷಾ ಗದ್ದಗಿಮಠ ಅತಿಥಿಗಳನ್ನು ಪರಿಚಯಿಸಿದರು. ರವಿ ಗದ್ದಗಿಮಠ ವಂದಿಸಿದರು.
ಪ್ರಶಸ್ತಿ ಪುರಸ್ಕೃತರಾದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಹನೂರ ಮಾತನಾಡಿ, ಡಾ. ಬಿ.ಎಸ್. ಗದ್ದಗಿಮಠ ಅವರು ಸೂಕ್ತ ಸೌಲಭ್ಯ ಹಾಗೂ ತಾಂತ್ರಿಕ ಸೌಲಭ್ಯವಿಲ್ಲದ ಕಾಲದಲ್ಲಿ ಕರ್ನಾಟಕದಾದ್ಯಂತ ಸಂಚರಿಸಿ ಒಂದು ಲಕ್ಷಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ಸಂಗ್ರಹಿಸಿ ನಮ್ಮ ಜಾನಪದ ಕಣಜ ಶ್ರೀಮಂತಗೊಳಿಸಿದ ಪ್ರಾತಃಸ್ಮರಣೀಯರು. ಅಕ್ಷರಗಳು ಮನುಷ್ಯ ಸಂಬಂಧ ಗಟ್ಟಿಗೊಳಿಸುತ್ತವೆ. ರಾಜಕಾರಣದಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಬೇಕು. ಲೀಲಾವತಿ ಆರ್.ಪ್ರಸಾದ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ ಮಹಾನ್ ಸಾಧಕರು. 1954ರಲ್ಲಿ ಡಾ. ಬಿ.ಎಸ್. ಗದ್ದಗಿಮಠ ಇಡೀ ಭಾರತದಲ್ಲಿ ಜಾನಪದ ಕ್ಷೇತ್ರದಲ್ಲಿ ಪಿ.ಎಚ್.ಡಿ ಪಡೆದ ಮೊದಲಿಗರು. ಅಂಥವರ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿ ನನ್ನ ಘನತೆ ಹೆಚ್ಚಿಸಿದೆ ಎಂದು ಹೇಳಿದರು.



