ಚಿತ್ರದುರ್ಗ: ಓವರ್‌ಟೇಕ್ ಮಾಡಲು ಹೋಗಿ ಲಾರಿಗೆ ಕಾರು ಗುದ್ದಿದ ಪರಿಣಾಮ ಕೊಲ್ಲಾಪುರದ ಡಿವೈಎಸ್‌ಪಿ ವೈಷ್ಣವಿ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಭೀಕರ ಅಪಘಾತಕ್ಕೀಡಾಗಿದೆ.
ಚಿತ್ರದುರ್ಗದ ತಮಟಕಲ್ಲು ಗ್ರಾಮದ ಬ್ರಿಡ್ಜ್ ಬಳಿ ನಡೆದ ಈ ದುರ್ಘಟನೆಯಲ್ಲಿ ಡಿವೈಎಸ್‌ಪಿ ವೈಷ್ಣವಿ ಅವರ ತಾಯಿ ಕಮಲ ಹರಿಬಾಬು (65) ಹಾಗೂ ಕಾರು ಚಾಲಕ ರಾಕೇಶ್ (40) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಡಿವೈಎಸ್‌ಪಿ ವೈಷ್ಣವಿ ಅವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಡಿವೈಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೈಷ್ಣವಿ ಅವರು ಮಹಾರಾಷ್ಟ್ರದಿಂದ ಬೆಂಗಳೂರು ಕಡೆಗೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕ ಓವರ್‌ಟೇಕ್ ಮಾಡುವ ಅವಸರದಲ್ಲಿ ಲಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಮೂವರು ಗಾಯಗೊಂಡಿದ್ದಾರೆ.
ಘಟನೆ ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



