ಗದಗ:- ವಾಸ್ತು ಶಿಲ್ಪ ಕಲೆಗಳನ್ನು ಹೊಂದಿರುವ ಗದಗದ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಶನಿವಾರ ರಾಜರ ಕಾಲದ ಅಪಾರ ಚಿನ್ನಾಭರಣಗಳ ನಿಧಿ ಪತ್ತೆಯಾಗಿದ್ದು, ಇದು ಇಡೀ ರಾಜ್ಯದ ಗಮನ ಸೆಳೆದಿದೆ.
ಕಸ್ತೂರವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ಪಾಯ ಅಗೆಯುವ ಸಂದರ್ಭದಲ್ಲಿ ಪ್ರಜ್ವಲ್ ರಿತ್ತಿ ಎಂಬ 8 ವರ್ಷದ ಮಗನಿಗೆ ಒಂದು ಹಿತ್ತಾಳೆ ತಂಬಿಗೆಯಲ್ಲಿ ಚಿನ್ನಾಭರಣ ಸಿಕ್ಕಿವೆ. ಆತ ತಕ್ಷಣವೇ ಗ್ರಾಮದ ಹಿರಿಯರಿಗೆ, ಪಂಚಾಯಿತಿ ಸದಸ್ಯರಿಗೆ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿದ್ದು ಪಾಟೀಲ್‌ಗೆ ವಿಷಯ ತಿಳಿಸಿದ್ದಾನೆ. ಬಳಿಕ ಸಿದ್ದು ಪಾಟೀಲ್ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್‌ಗೆ ಮಾಹಿತಿ ರವಾನಿಸಿದ್ರು ಹೆಚ್.ಕೆ ಪಾಟೀಲ್ ನಿರ್ದೇಶನದ ಮೇರೆಗೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಲಕ್ಕುಂಡಿ ಗ್ರಾಮಕ್ಕೆ ದೌಡಾಯಿಸಿ, ವಾಸ್ತವಾಂಶ ಪರಿಶೀಲಿಸಿದ್ರು.
ಬಳಿಕ ಆ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ತಾಯಿ, ಮಗನಿಗೆ ಸನ್ಮಾನ ಕೂಡ ಮಾಡಲಾಗಿತ್ತು. ಆದರೆ ಪ್ರಾಮಾಣಿಕತೆ ಮೆರೆದ ಕುಟುಂಬ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರೂ, ಈಗ ಆ ಕುಟುಂಬಕ್ಕೆ ಭಯ ಮತ್ತು ಆತಂಕ ಶುರುವಾಗಿದೆ. ನಿಧಿ ಸಿಕ್ಕಿದ ಸ್ಥಳವನ್ನು ನಿಷಿದ್ಧ ಪ್ರದೇಶವೆಂದು ಘೋಷಿಸಿರುವ ಕಾರಣ, ಅವರು ಕಟ್ಟುತ್ತಿದ್ದ ಮನೆ ಅರ್ಧಕ್ಕೆ ನಿಂತಿದೆ. ಹೀಗಾಗಿ, ವಾಸಕ್ಕೆ ಮನೆಯಿಲ್ಲದೆ ಕುಟುಂಬ ಬೀದಿಗೆ ಬಂದಂತಾಗಿದ್ದು, ಎಲ್ಲಿ ಬದುಕು ಸಾಗಿಸಬೇಕು ಎಂಬ ಚಿಂತೆಯಲ್ಲಿದೆ. ಮನೆಯ ಯಜಮಾನ ಮೃತಪಟ್ಟಿದ್ದು, ಕುಟುಂಬದಲ್ಲಿ ತಾಯಿ ಮತ್ತು ಚಿಕ್ಕ ಮಗನಿದ್ದಾನೆ. ಈ ಬಡ ಕುಟುಂಬಕ್ಕೆ ಈಗ ಆಸರೆ ಇಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಸದಸ್ಯರು ಮತ್ತು ಗ್ರಾಮಸ್ಥರು ಒಗ್ಗಟ್ಟಾಗಿ ನಿಂತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರ ಮಾನವೀಯ ದೃಷ್ಟಿಯಿಂದ ಕುಟುಂಬಕ್ಕೆ ಒಂದು ನಿವೇಶನ ಅಥವಾ ಮನೆಯನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕುಟುಂಬದವರು ಚಿನ್ನದ ಆಸೆಯನ್ನು ಬಿಟ್ಟು, ನಮಗೆ ಮನೆ ಬೇಕು ಎಂದು ಕಣ್ಣೀರು ಹಾಕುತ್ತಿದ್ದಾರೆ. ಇನ್ನೂ ಸ್ಥಳಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ರಮೇಶ್ ಮೂಲಿಮನಿ ಭೇಟಿ ನೀಡಿ ಜಾಗವನ್ನು ಪರಿಶೀಲಿಸಿದ ಬಳಿಕ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ.
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಲ್ಲ:-
ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯ ಹಾಕುವ ವೇಳೆ ಚಿನ್ನ ಪತ್ತೆಯಾದ ಪ್ರಕರಣದ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದೆ. ಧಾರವಾಡ ವಲಯದ ಎಎಸ್‌ಐ ಅಧೀಕ್ಷಕ ರಮೇಶ್ ಮೂಲಿಮನಿ ಅವರು ಚಿನ್ನ ಸಿಕ್ಕ ಸ್ಥಳವನ್ನು ಪರಿಶೀಲನೆ ನಡೆಸಿ ಬಳಿಕ ಮಾತನಾಡಿದರು. “ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಲ್ಲ. ಈ ಚಿನ್ನ ಯಾವ ಕಾಲಕ್ಕೆ ಸೇರಿದ್ದು ಎಂಬುದನ್ನು ಪರಿಶೀಲನೆ ಮಾಡುತ್ತೇವೆ. ಮೇಲ್ನೋಟಕ್ಕೆ ನೋಡಿದಾಗ ಬಹಳ ಹಳೆಯದ್ದು ಅಂತ ಅನಿಸುತ್ತಿಲ್ಲ. ಎಲ್ಲಾ ಆಯಾಮಗಳಿಂದಲೂ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಚಿನ್ನ ರಾಜಮನೆತನಕ್ಕೆ ಸೇರಿದ್ದಾ? ಅಥವಾ ಕುಟುಂಬದ್ದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಂಗಾರ ಮನೆಯಲ್ಲಿ ಸಿಕ್ಕಿದ್ದರೆ ಅದು ಕುಟುಂಬಕ್ಕೆ ಸೇರಿದ್ದೆ ಆಗಿರುತ್ತದೆ. ದೇವಸ್ಥಾನದಲ್ಲಿ ಸಿಕ್ಕಿದ್ದರೆ ಮಾತ್ರ ರಾಜಮನೆತನಕ್ಕೆ ಸೇರಿದ್ದಾಗಿರಬಹುದು. ರಾಜಮನೆತನದ್ದಾದರೆ ಅದರ ಮೇಲೆ ಲಾಂಛನಗಳು ಇರ್ತಾಯಿತ್ತು. ಈ ಚಿನ್ನದ ಆಭರಣಗಳು ಹಾನಿಗೊಳಗಾಗಿರುವುದರಿಂದ, ಹಿಂದಿನ ಕಾಲದಲ್ಲಿ ಆ ಕುಟುಂಬವು ಅವುಗಳನ್ನು ಮನೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಂಡಿರಬಹುದೆಂಬ ಸಾಧ್ಯತೆ ಇದೆ ಎಂದು ಎಎಸ್‌ಐ ಅಧೀಕ್ಷಕರು ಮಾಹಿತಿ ನೀಡಿದರು.
‘ನಿಧಿಯಲ್ಲ ಅಂದ್ರೆ ನಮ್ಮ ಚಿನ್ನ ನಮಗೆ ಕೊಡಿ’;
ಇನ್ನೂ ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ರಮೇಶ್ ಮೂಲಿಮನಿ ಅವರು “ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಲ್ಲ” ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಹಾಗಾದ್ರೆ ಇದು ನಮ್ಮ ಪೂರ್ವಜರು ಇಟ್ಟಿರಬಹುದು ನಮ್ಮ ಚಿನ್ನ ನಮಗೆ ಕೊಡಿ” ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಅಲ್ಲದೇ ಗ್ರಾಮಸ್ಥರು ಕೂಡ ಕಾನೂನು ಪ್ರಕ್ರಿಯೆ ಮುಗಿಸಿ ಚಿನ್ನವನ್ನು ಸಂಬಂಧಪಟ್ಟ ಕುಟುಂಬಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಟ್ಟಾರೆ ಲಕ್ಕುಂಡಿ ನಿಧಿ ಪ್ರಕರಣದಲ್ಲಿ ಈ ಬೆಳವಣಿಗೆ ಬಿಗ್ ಟ್ವಿಸ್ಟ್ ಆಗಿದ್ದು, ಮುಂದಿನ ಕ್ರಮಗಳ ಬಗ್ಗೆ ಎಲ್ಲರ ಗಮನ ಸೆಳೆದಿದೆ.



