ಚಿಕ್ಕಮಗಳೂರು: ಇನ್‌ಸ್ಟಾಗ್ರಾಂನಲ್ಲಿ ಶಾಸಕಿ ನಯನಾ ಮೋಟಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿ ಅವಮಾನಿಸಿದ ಯುವಕ ಇದೀಗ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಯನಾ ಮೋಟಮ್ಮ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಎರಡು ಖಾತೆಗಳಿವೆ — ಒಂದು ವೈಯಕ್ತಿಕ, ಮತ್ತೊಂದು ರಾಜಕೀಯ. ವೈಯಕ್ತಿಕ ಖಾತೆಯಲ್ಲಿ ಪ್ರವಾಸ ಹಾಗೂ ಖಾಸಗಿ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದ ವೇಳೆ, ಬಟ್ಟೆ ವಿಚಾರ ಹಿಡಿದು ಕೆಲವರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡತೊಡಗಿದರು. ಈ ಕಾಮೆಂಟ್‌ಗಳು ಕ್ರಮೇಣ ಅವಮಾನಕಾರಿ ಮಟ್ಟ ತಲುಪಿದ್ದವು.
ಈ ಬಗ್ಗೆ ಶಾಸಕಿ ಅವರ ಪಿಎ ಸಂಸುದ್ದೀನ್ ಅವರು ಅಕ್ಟೋಬರ್ ತಿಂಗಳಲ್ಲೇ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆರೋಪಿಯು ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಶಾಸಕಿ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಕಾಮೆಂಟ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ತನಿಖೆ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಮರುಮರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದು, ಉದ್ದೇಶಪೂರ್ವಕವಾಗಿ ಅವಮಾನ ಮಾಡುವ ಪ್ರಯತ್ನ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದ ಬಳಿಕ, ನಯನಾ ಮೋಟಮ್ಮ ಅವರು ಕೂಡ ಇನ್‌ಸ್ಟಾಗ್ರಾಂನಲ್ಲಿ ತಮ್ಮ ನೋವು ಹೊರಹಾಕಿದ್ದರು. “ಸ್ಲೀವ್ ಲೆಸ್ ಬಟ್ಟೆ ಹಾಕಿದರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ. ಕೆಲವರು ನನ್ನನ್ನು ವೇಶ್ಯೆ ಎಂದು ಕರೆಯುವ ಮಟ್ಟಕ್ಕೂ ಇಳಿದಿದ್ದಾರೆ. ಡಿಪಿ ಇಲ್ಲದ ಪ್ರೊಫೈಲ್‌ಗಳಿಂದ ಕಾಮೆಂಟ್ ಮಾಡುತ್ತಾರೆ. ಆದರೆ ಒಂದು ದಿನ ನಾನವರನ್ನು ಎದುರಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದರು.
ಒಟ್ಟಿನಲ್ಲಿ, ಈ ಪ್ರಕರಣ ಇದೀಗ ಮಹಿಳೆಯರ ಮೇಲೆ ನಡೆಯುವ ಆನ್‌ಲೈನ್ ಕಿರುಕುಳದ ವಿರುದ್ಧ ದೊಡ್ಡ ಚರ್ಚೆಗೆ ಕಾರಣವಾಗಿದೆ.



