ಮಂಡ್ಯ: ಜಿಲ್ಲೆಯ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸದ್ಧಾಂ ಹುಸೇನ್ ಮತ್ತು ಸೈಯದ್ ಅಯೂಬ್ ಬಂಧಿತರು. ಆರೋಪಿಗಳು ಈ ಹಿಂದೆ 30 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದರು. ಶಿಕ್ಷೆ ಪಡೆದು ಹೊರಬಂದರೂ ಬುದ್ಧಿ ಕಲಿಯದೆ, ಒಂಟಿ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವುದು, ಮನೆಗಳಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳತನ ಮಾಡುವುದು, ಹೀಗೆ ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.
ಇತ್ತೀಚೆಗೆ ಕಿರುಗಾವಲು ಪೊಲೀಸರು ತನಿಖೆ ನಡೆಸಿ ಮಹತ್ವದ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 31.98 ಲಕ್ಷ ರೂ. ಮೌಲ್ಯದ 253 ಗ್ರಾಂ ಚಿನ್ನ, 17 ಗ್ರಾಂ ಬೆಳ್ಳಿ ಹಾಗೂ ಪಲ್ಸರ್ ಮತ್ತು ಆಕ್ಸಿಸ್ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮಂಡ್ಯ ಮಾತ್ರವಲ್ಲದೇ ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಹ ಕಳ್ಳತನ ನಡೆಸಿದ್ದಾರೆ ಎಂಬುವುದು ಪೊಲೀಸರ ತನಿಖೆಯಲ್ಲಿ ಹೊರಬಂದಿದೆ.



