ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿಯಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಹೇಳಿಕೆ ನೀಡಿದ್ದರು. ಇದು ಬಾಯ್ತಪ್ಪಿನಿಂದ ಆದ ಹೇಳಿಕೆಯಾಗಿದೆ. ಸಿಕ್ಕಿರುವ ಒಡವೆಗಳು 100ಕ್ಕೂ ಹೆಚ್ಚು ವರ್ಷ ಹಳೆಯದಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಯಾವ ಕಾಲದ್ದು, ಎಷ್ಟು ಹಳೆಯದು ಎನ್ನುವ ಮಾಹಿತಿ ಸಿಗಲಿದೆ. ತಪ್ಪು ಮಾಹಿತಿ ನೀಡಿದ ಪುರಾತತ್ವ ಇಲಾಖೆ ಅಧಿಕಾರಿಯ ಹೇಳಿಕೆಯ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಕ್ಕ ಚಿನ್ನವನ್ನು ರಿತ್ತಿ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ನೀಡುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ. ಸರ್ಕಾರದ ಜೊತೆ ಚರ್ಚೆ ನಡೆಸಿ ಕುಟುಂಬಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳವಾರ ರಾಜ್ಯ ಪುರಾತತ್ವ ಇಲಾಖೆಯ ಸ್ಮಿತಾ ರೆಡ್ಡಿ ಸ್ಥಳಕ್ಕೆ ಆಗಮಿಸಲಿದ್ದಾರೆ. ಅವರು ನಡೆಸುವ ತನಿಖೆಯಿಂದ ಈ ಕುರಿತು ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ ಎಂದರು.
ಸ್ಥಳದಲ್ಲಿ ಒಟ್ಟು 470 ಗ್ರಾಂ ಬಂಗಾರದ ಒಡವೆಗಳು ಸಿಕ್ಕಿವೆ. ಜಿಲ್ಲಾಡಳಿತದಿಂದ ಈಗಾಗಲೇ ಸ್ಥಳಕ್ಕೆ ತೆರಳಿ ಮಹಜರು ಮಾಡಲಾಗಿದೆ. ಚಿನ್ನದ ತೂಕದ ಬಗ್ಗೆ ಹಲವು ದ್ವಂದ್ವ ಹೇಳಿಕೆಗಳು ಕೇಳಿ ಬರುತ್ತಿವೆ. ಗಾಳಿ ಮಾತುಗಳು ಎಲ್ಲವೂ ಸುಳ್ಳು. ಪ್ರಜ್ವಲ್ ಎನ್ನುವ ಹುಡುಗ ಚಿನ್ನವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾನೆ. ಈಗಾಗಲೇ ಆ ಹುಡುಗನಿಗೆ ಸನ್ಮಾನ ಮಾಡಲಾಗಿದೆ. ಬಹುಮಾನ ನೀಡುವ ಕುರಿತು ಇನ್ನೂ ಚರ್ಚೆ ಆಗಿಲ್ಲ. ಸರ್ಕಾರದ ಹಂತದಲ್ಲಿ ಚರ್ಚೆ ನಂತರ ಬಹುಮಾನ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.
ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ ಮಾತನಾಡಿ, ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದೆ. ಅಲ್ಲಿ ಸಿಕ್ಕ ಅವಶೇಷಗಳು 100 ವರ್ಷ ಮೇಲ್ಪಟ್ಟದ್ದಾಗಿವೆ ಎಂದು ಅಂದಾಜು ಮಾಡಲಾಯಿತು. ಕರ್ನಾಟಕ ನಿಕ್ಷೇಪ ನಿಧಿಯ ಅಡಿಯಲ್ಲಿ ಭೂಮಿಯ ಆಳದಲ್ಲಿ 10 ರೂಪಾಯಿಗಿಂತ ಹೆಚ್ಚಿನ ವಸ್ತುಗಳು ಏನೇ ಸಿಕ್ಕರೂ 1962ರ ಕಾಯ್ದೆಯ ಪ್ರಕಾರ ಸರ್ಕಾರಕ್ಕೆ ಸೇರಿದ್ದು ಎನ್ನುವ ಕಾನೂನು ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದಲಿಂಗೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ವಾರ್ತಾಧಿಕಾರಿ ವಸಂತ ಮಡ್ಲೂರ, ಡಾ. ಆರ್. ಶ್ರೀಜೇಶ್ ಮುಂತಾದವರು ಉಪಸ್ಥಿತರಿದ್ದರು.
ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿ ಅಲ್ಲ ಎಂದು ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ ಭಾನುವಾರವಷ್ಟೇ ಹೇಳಿಕೆ ನೀಡಿದ್ದರು. ಆದರೆ, ಈಗ ತಮ್ಮ ಹೇಳಿಕೆಯಿಂದ ಯು ಟರ್ನ್ ಹೊಡೆದಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರೂ ರಮೇಶ್ ಮೂಲಿಮನಿ ಮೌನಕ್ಕೆ ಶರಣಾಗಿದ್ದರು. ಪುರಾತತ್ವ ಇಲಾಖೆಯ ಅಧಿಕಾರಿಯ ದ್ವಂದ್ವ ಹೇಳಿಕೆಯಿಂದ ಸಾರ್ವಜನಿಕರಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿರುವುದಂತೂ ಸತ್ಯ.



