ಬೆಂಗಳೂರು: ಜ.17ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಪಾದಯಾತ್ರೆ ನಡೆಸುವ ಅಪೇಕ್ಷೆಯೂ ಇದ್ದು, ಈ ಕುರಿತು ಮುಂದಿನ ದಿನಗಳಲ್ಲಿ ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕ ಗೂಂಡಾವರ್ತನೆ ತೋರಿದ್ದು, ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. “ಅವರ ಅಂಗರಕ್ಷಕರೇ ಅವರ ಕಾರ್ಯಕರ್ತನನ್ನು ಕೊಂದಿದ್ದಾರೆ. ಸುಳಿವು ಬಿಟ್ಟುಬಿಡದಿರಲು ರಾಜಶೇಖರ್ ಶವವನ್ನು ಸುಡಲಾಗಿದೆ. ಇದಕ್ಕೆ ವಿರೋಧವಾಗಿ ಜ.17ರಂದು ಬಳ್ಳಾರಿಯಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ” ಎಂದು ಹೇಳಿದರು.
ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರು ಪಾದಯಾತ್ರೆ ನಡೆಸುವ ಆಸೆ ವ್ಯಕ್ತಪಡಿಸಿದ್ದು, ಅದನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದರು. “ಪಾದಯಾತ್ರೆ ಮಾಡಬಾರದು ಎಂಬ ನಿರ್ಬಂಧ ಇಲ್ಲ. ನಮಗೂ ಆಸೆ ಇದೆ. ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಇದೇ ವೇಳೆ, ಕಳೆದ 5 ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿದ್ದು, 39 ಸಂಘಟನಾತ್ಮಕ ಜಿಲ್ಲೆಗಳ ಸರಣಿ ಸಭೆಗಳಲ್ಲಿ ಜಿಲ್ಲೆಯ ರಾಜಕೀಯ ಸ್ಥಿತಿಗತಿ, ಚುನಾವಣಾ ತಯಾರಿ ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಕೇಂದ್ರ ಚುನಾವಣಾ ಆಯೋಗ ತೀರ್ಮಾನ ಕೈಗೊಂಡಿದ್ದು, ಬೋಗಸ್ ಮತದಾರರನ್ನು ಕೈಬಿಡುವ ಪ್ರಕ್ರಿಯೆಯನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ವಿಜಯೇಂದ್ರ ಹೇಳಿದರು.



