ಬೆಂಗಳೂರು: ನರೇಗಾ ವಿಚಾರವಾಗಿ ಸರ್ಕಾರ ವಿಶೇಷ ಅಧಿವೇಶನ ನಡೆಸಿ ಚರ್ಚೆ ಮಾಡಲಿ, ನಾವು ಸಂಪೂರ್ಣವಾಗಿ ಸಿದ್ಧ ಎಂದು ಸರ್ಕಾರಕ್ಕೆ ಮಾಜಿ ಸಚಿವ ಸಿ.ಟಿ. ರವಿ ಸವಾಲ್ ಹಾಕಿದ್ದಾರೆ.
ನರೇಗಾ ವಿಷಯದ ಕುರಿತು ಸರ್ಕಾರ ಇಂದು ವಿಶೇಷ ಕ್ಯಾಬಿನೆಟ್ ಸಭೆ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿಶೇಷ ಕ್ಯಾಬಿನೆಟ್ ಅಲ್ಲ, ವಿಶೇಷ ಅಧಿವೇಶನವೇ ಕರೆಯಲಿ. ಈಗಾಗಲೇ ವಿಜಯೇಂದ್ರ, ಆರ್. ಅಶೋಕ್ ಹಾಗೂ ಕುಮಾರಸ್ವಾಮಿ ಅವರು ಈ ವಿಚಾರದಿಂದ ರಾಜ್ಯದ ಹಿತಾಸಕ್ತಿಗೆ ಏನು ಧಕ್ಕೆ ಆಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು. ಬೇಕಾದರೆ ಸಾರ್ವಜನಿಕವಾಗಿ ಅಥವಾ ವಿಶೇಷ ಅಧಿವೇಶನದಲ್ಲೇ ಒಂದು ದಿನ ಪೂರ್ಣ ಚರ್ಚೆ ನಡೆಸೋಣ ಎಂದು ಸಿ.ಟಿ. ರವಿ ಹೇಳಿದ್ದಾರೆ.
ನರೇಗಾ ಯೋಜನೆಯಲ್ಲಿ ಎಷ್ಟು ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ? ಲಾಭ ಎಷ್ಟು, ನಷ್ಟ ಎಷ್ಟು? ಮನ್ರೇಗಾ ಮೂಲಕ ಜನರಿಗೆ ಎಷ್ಟು ಲಾಭವಾಗಿದೆ? ಗುತ್ತಿಗೆದಾರರಿಗೆ ಎಷ್ಟು ಲಾಭವಾಗಿದೆ? ಎಷ್ಟು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ? ಎಲ್ಲವನ್ನೂ ತೆರೆದ ಚರ್ಚೆಗೆ ತರುವುದಾಗಿ ಅವರು ಸವಾಲು ಹಾಕಿದರು.
ಇದೇ ವೇಳೆ ರಾಮನ ಹೆಸರಿನ ಬಗ್ಗೆ ಕಾಂಗ್ರೆಸ್‌ಗೆ ಯಾಕೆ ದ್ವೇಷ ಎಂಬ ಪ್ರಶ್ನೆ ಎತ್ತಿದ ಸಿ.ಟಿ. ರವಿ, ಗಾಂಧೀಜಿ ರಾಮನ ವ್ಯಕ್ತಿತ್ವದಿಂದ ಪ್ರೇರಣೆ ಪಡೆದು ರಾಮರಾಜ್ಯ ನಿರ್ಮಾಣದ ಬಗ್ಗೆ ಮಾತನಾಡಿದ್ದರು. ಮಧ್ಯರಾತ್ರಿಯಲ್ಲೂ ಮಹಿಳೆಯರು ನಿರ್ಭಯವಾಗಿ ಓಡಾಡುವ ಸಮಾಜವೇ ರಾಮರಾಜ್ಯ ಎಂಬುದು ಗಾಂಧೀಜಿಯ ಕನಸಾಗಿತ್ತು. ಆದರೆ ಮಹಿಳೆಯರು ಕುಡಿದು ತೂರಾಡಿ ಓಡಾಡಬೇಕು ಎಂದು ಅವರು ಹೇಳಿರಲಿಲ್ಲ. ಕುಡಿದವರಿಗೆ ಮನೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡ್ತೀವಿ ಎನ್ನುವುದು ಗಾಂಧೀಜಿಯ ರಾಮರಾಜ್ಯ ಅಲ್ಲ ಎಂದು ಕಿಡಿಕಾರಿದರು. ಜಿ ರಾಮ್ ಜಿ ಬಿಲ್‌ನಲ್ಲಿ ಗೋಡ್ಸೆ ರಾಮ ಇದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ. ರವಿ, ಸಿದ್ದರಾಮನಲ್ಲೂ ರಾಮ ಇದ್ದಾನೆ ಎಂದು ಪ್ರತಿಕ್ರಿಯಿಸಿದರು.
ರಾಮನನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಭಾವನೆ, ಭಕ್ತಿಯ ದೃಷ್ಟಿಯಿಂದ ಕಾಣುತ್ತಾರೆ. ಸಿದ್ದರಾಮಯ್ಯ ಅವರು ಯಾವ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಗೋಡ್ಸೆಯಲ್ಲೇ ರಾಮನನ್ನು ನೋಡ್ತಿರಬಹುದು. ಅವರವರಿಗೆ ಅವರವರ ತರನಾಗಿ ರಾಮ ಕಾಣುತ್ತಿರಬಹುದು ಎಂದು ವ್ಯಂಗ್ಯವಾಡಿದರು.



