ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯೂ ಸೇರಿದಂತೆ ರಾಜ್ಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ಕಡಲೆ ಬೆಳೆಯಲಾಗಿದ್ದು, ಈಗಾಗಲೇ ಕಡಲೆ ಕಟಾವು ಮಾಡಲಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಗದಗ ಜಿಲ್ಲಾದ್ಯಂತ ಕಡಲೆ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಹಾಗೂ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿ ಕ್ವಿಂಟಾಲ್ ಕಡಲೆಗೆ 10 ಸಾವಿರ ರೂ ಹೊಸ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಂದ 50 ಕ್ವಿಂಟಾಲ್ ಕಡಲೆ ಕಾಳನ್ನು ಸರ್ಕಾರ ಖರೀದಿಸಬೇಕು. ಕಳೆದ ವರ್ಷ ಕೇಂದ್ರ ಸರ್ಕಾರ ಆದೇಶಿಸಿದ ಹಳೆ ಬೆಲೆಯನ್ನು ರದ್ದುಗೊಳಿಸಿ ಹೊಸ ಬೆಲೆಗೆ ಕಡಲೆ ಖರೀದಿಸಬೇಕು. ಕಡಲೆ ಖರೀದಿಸಿದ ಒಂದು ತಿಂಗಳೊಳಗೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಬೇಕು. ರೈತರು ಮಾರುಕಟ್ಟೆಗೆ ಧಾನ್ಯ ತಂದ ಮೇಲೆ ಖರೀದಿ ಕೇಂದ್ರ ತೆರೆಯುವುದರಲ್ಲಿ ಅರ್ಥವಿಲ್ಲ. ಸರ್ಕಾರ ಇನ್ನೊಂದು ವಾರದೊಳಗೆ ಖರೀದಿ ಪ್ರಕ್ರಿಯೆ ಆರಂಭಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಬಸವರಾಜ ಹೂಗಾರ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಹೆಸರು ಬೆಳೆಗೆ ಬೆಂಬಲ ಪ್ರಯೋಜನವಾಗಲಿಲ್ಲ. ಈಗ ಮೆಕ್ಕೆಜೋಳದ ಬೆಂಬಲ ಬೆಲೆಯಲ್ಲಿಯೂ ಕೂಡ ದಿನಕ್ಕೊಂದು ಹೊಸ ಆದೇಶ ಹೊರಡಿಸಿ ಸರ್ಕಾರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ ಎಂದರು.
ಸರ್ಕಾರದಿಂದ ಕಡಲೆ ಖರೀದಿ ಕೇಂದ್ರ ತೆರೆಯಲು ವಿಳಂಬವಾದರೆ ರೈತ ಸಂಘದಿಂದ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘದ ಹಾವೇರಿ ಅಧ್ಯಕ್ಷ ಯಲ್ಲಪ್ಪ ವಾಲ್ಮೀಕಿ ಎಚ್ಚರಿಸಿದ್ದಾರೆ.



