ಮಂಡ್ಯ: ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತದಿಂದ ಗಡಿ ಭದ್ರತಾ ಪಡೆ (BSF) ಯೋಧನೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯೋಧರನ್ನು ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ. ಮಾದೇಗೌಡ (44) ಎಂದು ಗುರುತಿಸಲಾಗಿದೆ.
ಮೃತ ಯೋಧ ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಚಾಕೋರುದಲ್ಲಿರುವ BSF ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 2000ರಲ್ಲಿ ಮೈಸೂರಿನಲ್ಲಿ ನಡೆದ BSF ಸೇನಾ ನೇಮಕಾತಿ ರ್ಯಾಲಿಯಲ್ಲಿ ಆಯ್ಕೆಯಾಗಿ BSF ಸೇರಿದ್ದ ಮಾದೇಗೌಡ, ಕಳೆದ 25 ವರ್ಷಗಳಿಂದ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು.
ಮೃತ ಯೋಧರಿಗೆ ಪತ್ನಿ ಎಸ್. ಶಿಲ್ಪಾ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಮೃತ ಯೋಧರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲಾಗಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಗಣಿಗ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪುಷ್ಪಗುಚ್ಛ ಇಟ್ಟು ಗೌರವ ನಮನ ಸಲ್ಲಿಸಿದರು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುತಾತ್ಮ ಯೋಧರಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಬಳಿಕ ಜಿಲ್ಲಾಡಳಿತದ ವತಿಯಿಂದ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಇದೇ ವೇಳೆ ಶಾಸಕ ಗಣಿಗ ರವಿಕುಮಾರ್, ಡಿಸಿ ಡಾ.ಕುಮಾರ ಹಾಗೂ ಎಸ್ಪಿ ಶೋಭಾರಾಣಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಧ್ಯಾಹ್ನದ ನಂತರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.



