ಗದಗ: ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ನಿಧಿಯಲ್ಲಿನ ಒಡವೆಗಳು ವಿಜಯನಗರ ಸಾಮ್ರಾಜ್ಯ ಅಥವಾ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿರುವ ಸಾಧ್ಯತೆ ಇದೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾಹಿತಿ ನೀಡಿದ್ದಾರೆ.
ಪತ್ತೆಯಾದ ಒಡವೆಗಳು ಕನಿಷ್ಠ 300 ವರ್ಷಗಳಿಗಿಂತಲೂ ಹಳೆಯದಾಗಿದ್ದು, ಬ್ರಿಟಿಷ್ ಕಾಲಕ್ಕೂ ಮೊದಲುಗಿನವುಗಳಾಗಿವೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಒಡವೆಗಳನ್ನು ಈಗಾಗಲೇ ಪರಿಶೀಲನೆ ನಡೆಸಲಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ನಾಲ್ಕು ಮಂದಿ ಅಧಿಕಾರಿಗಳ ತಂಡ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ನಾಲ್ವರು ಅಧಿಕಾರಿಗಳ ತಂಡದಿಂದ ಪರಿಶೀಲನೆ ಮಾಡಲಾಗಿದೆ.

ಪೊಲೀಸ್ ಇಲಾಖೆಯ ಕಣ್ಗಾವಲಿನಲ್ಲಿಯೇ ಸಂಪೂರ್ಣ ವಿಡಿಯೋ ಚಿತ್ರೀಕರಣದ ಮೂಲಕ ಈ ಪರಿಶೀಲನೆ ಪ್ರಕ್ರಿಯೆ ನಡೆಸಲಾಗಿದೆ. ಒಡವೆಗಳ ಕುರಿತು ಸಂಪೂರ್ಣ ವರದಿ ಬರಲು ಮೂರು ದಿನಗಳ ಕಾಲ ಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ನೋಡಿದಾಗ ಈ ಒಡವೆಗಳು ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದವುಗಳೆಂದು ತೋರುತ್ತಿದೆ. ಒಡವೆಗಳ ಗಾತ್ರವನ್ನು ಗಮನಿಸಿದರೆ, ದಷ್ಟಪುಷ್ಟ ವ್ಯಕ್ತಿಗಳು ಧರಿಸುತ್ತಿದ್ದ ಆಭರಣಗಳಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವಾಗಿ ಕೈಕಡಗ, ಕಿವಿಯ ಓಲೆಗಳ ವಿನ್ಯಾಸವನ್ನು ಆಧರಿಸಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ವರದಿ ಬಂದ ಬಳಿಕ ನಿಖರವಾದ ಕಾಲಘಟ್ಟ ಹಾಗೂ ಇತಿಹಾಸಿಕ ಹಿನ್ನೆಲೆ ಸ್ಪಷ್ಟವಾಗಲಿದೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾಹಿತಿ ನೀಡಿದ್ದಾರೆ.



