ಬೆಂಗಳೂರು: ಬಳ್ಳಾರಿ ವಿಷಯ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುವ ಸಂದರ್ಭದಲ್ಲೇ ಶಿಡ್ಲಘಟ್ಟದಲ್ಲೂ ಬ್ಯಾನರ್ ಹಾಕಿದ್ದಾರೆ. ಬ್ಯಾನರ್ ಹಾಕಲು ಅನುಮತಿ ಪಡೆದಿದ್ದೀರಾ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದ್ದಾರೆ. ಪತ್ರವನ್ನೂ ನೀಡಿಲ್ಲ ಹಣ ಕಟ್ಟಿಲ್ಲ; ಅನುಮತಿ ಪಡೆದಿಲ್ಲ ಎಂದು ಕಮೀಷನರ್ ಹೇಳಿದ್ದಾಗಿ ಗಮನ ಸೆಳೆದರು.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಕಾಂಗ್ರೆಸ್ ನಾಯಕರ ಅಟ್ಟಹಾಸ ರಾಜ್ಯದಲ್ಲಿ ಹೆಚ್ಚಾಗಿದೆ. ದರ್ಪ ಹೆಚ್ಚಾಗಿದೆ. ಮುಖ್ಯಮಂತ್ರಿಗಳು ರಾಜೀವ್ ಗೌಡರನ್ನು ಬಂಧಿಸಬೇಕು. ಕಾನೂನು ಕೈಗೆತ್ತಿಕೊಳ್ಳುವ ಮಾತನಾಡಿದ ಇವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ತಕ್ಷಣ ಬಂಧಿಸಬೇಕು. ಇಲ್ಲವಾದರೆ, ಇದನ್ನು ನಾವು ರಾಜ್ಯಮಟ್ಟದ ವರೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ನಾಯಕರು ಇಂಥ ದುಂಡಾವರ್ತಿ ಮಾಡುವುದು ಸರಿಯೇ ಎಂದು ಕೇಳಿದರು. ನಿಂದನೆಯ ಹಿನ್ನೆಲೆಯಲ್ಲಿ ಪೌರಕಾರ್ಮಿಕರೂ ಅಲ್ಲಿ ಧರಣಿ ಕುಳಿತಿದ್ದಾರೆ. ಇದನ್ನು ಬಿಜೆಪಿ ವಿಶೇಷ ಆದ್ಯತೆ ಮೇಲೆ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆಕ್ಷೇಪಿಸಿದರು.
ಇವತ್ತು ಬೆಳಿಗ್ಗೆಯಿಂದ ಮಾಧ್ಯಮಗಳಲ್ಲಿ ಶಿಡ್ಲಘಟ್ಟದಲ್ಲಿ ನಡೆದ ಬ್ಯಾನರ್ ವಿಚಾರಕ್ಕೆ ಕಾಂಗ್ರೆಸ್ಸಿನ ಮುಖಂಡ ರಾಜೀವ್ ಗೌಡ ಎಂಬ ವ್ಯಕ್ತಿ ಅಲ್ಲಿನ ಮುನ್ಸಿಪಲ್ ಕಮೀಷನರ್‍ರನ್ನು ವಾಚಾಮಗೋಚರವಾಗಿ ನಿಂದಿಸಿದ್ದಲ್ಲದೇ, ಬೆಂಕಿ ಹಚ್ಚಿ ಸುಟ್ಟು ಬಿಡುವ ಬೆದರಿಕೆ ಹಾಕಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪರಿಶಿಷ್ಟ ಜಾತಿ ವರ್ಗಗಳಿಗೆ ಸೇರಿದ ಪೌರ ಕಾರ್ಮಿಕರನ್ನೂ ಕೆಟ್ಟ ಭಾಷೆಯಲ್ಲಿ ನಿಂದಿಸಿ, ಎಲ್ಲರನ್ನೂ ಶಿಡ್ಲಘಟ್ಟ ಬಿಡಿಸಿ ಓಡಿಸುವೆ; ಯಾರ್ಯಾರು ಬ್ಯಾನರ್ ಕಿತ್ತು ಹಾಕಿದವರ ವಿರುದ್ಧ ಕೆಟ್ಟ ಪದ ಬಳಸಿದ್ದಾಗಿ ಆಕ್ಷೇಪಿಸಿದರು.



