ಬೆಂಗಳೂರು: ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರಗೆ ದೊಡ್ಡ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಸಿಬಿಐ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಬಳಿಕ ಬಂಧನ ಭೀತಿಯಲ್ಲಿದ್ದ ನಾಗೇಂದ್ರ, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ (ಜ.13) ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ವಾದ–ಪ್ರತಿವಾದ ಆಲಿಸಿ ಬುಧವಾರಕ್ಕೆ (ಜ.14) ಆದೇಶ ಕಾಯ್ದಿರಿಸಿತ್ತು. ಇದೀಗ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಿಚಾರಣೆ ವೇಳೆ ತನಿಖಾಧಿಕಾರಿಯೇ ಕೋರ್ಟ್ನಲ್ಲಿ ವಾದ ಮಂಡನೆ ಮಾಡಿ, ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರ ಕುರಿತು ಸಿಐಡಿ ಹಾಗೂ ಇಡಿ ತನಿಖೆ ನಡೆಸಿರುವುದಾಗಿ ತಿಳಿಸಿದರು. ಹಗರಣದಿಂದ ಲಾಭ ಪಡೆದವರು ಯಾರು ಎಂಬುದನ್ನು ಪತ್ತೆ ಹಚ್ಚಬೇಕಿದ್ದು, ಕೆಲವು ಮಾಹಿತಿಗಳನ್ನು ತೆರೆದ ನ್ಯಾಯಾಲಯದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ಮುಂಬೈನಲ್ಲಿ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಹಗರಣದ ಹಣವನ್ನು ಚಿನ್ನ ಮತ್ತು ಬುಲಿಯನ್ ರೂಪದಲ್ಲಿ ಪರಿವರ್ತಿಸಲಾಗಿದೆ. ಇದರ ಹಿಂದೆ ನಾಗೇಂದ್ರ ಹಾಗೂ ಅವರ ಸಹಚರರು ಭಾಗಿಯಾಗಿದ್ದಾರೆ. ಬೋಗಸ್ ಕಂಪನಿಗಳ ಬಳಕೆಯ ಬಗ್ಗೆ ಸಾಕ್ಷ್ಯಗಳಿವೆ ಎಂದು ತನಿಖಾಧಿಕಾರಿ ತಿಳಿಸಿ, ಕೋರ್ಟ್ಗೆ ಎರಡು ಸೂಟ್ಕೇಸ್ಗಳಷ್ಟು ದಾಖಲೆಗಳನ್ನು ಹಾಜರುಪಡಿಸಿದರು.
ನಾಗೇಂದ್ರ ಪರ ವಕೀಲರು ವಾದ ಮಂಡಿಸಿ, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ಹಣಕಾಸು ವ್ಯವಹಾರ ವೈಯಕ್ತಿಕವಾದದ್ದು. ಸಿಬಿಐ ಉಲ್ಲೇಖಿಸಿರುವ ಟೆಂಡರ್ಗಳಿಗೆ ಈ ವ್ಯವಹಾರಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.



