ಬೀದರ್: ಜಿಲ್ಲೆಯ ಪೊಲೀಸ್ ಕಾನ್ಸಟೇಬಲ್ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣ ಇದೀಗ ಹೊಸ ಆಯಾಮ ಪಡೆದುಕೊಂಡಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ಪೊಲೀಸ್ ಕಾನ್ಸಟೇಬಲ್ ಮಚೇಂದ್ರ ಇದೀಗ ಪ್ರತಿದಾಳಿ ನಡೆಸಿದ್ದು, ಪತ್ನಿ ಸೀನಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪತ್ನಿ, ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ, ತನ್ನನ್ನು ಕೊಲ್ಲಲು ಯತ್ನಿಸಿದ್ದಾಳೆ ಎಂದು ಮಚೇಂದ್ರ ಆರೋಪಿಸಿದ್ದಾರೆ. ಊಟಕ್ಕೆ ವಿಷ ಬೆರೆಸಿ ಕೊಲ್ಲುವ ಸಂಚು ರೂಪಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲೂ ಪತ್ನಿ ಭೇಟಿಗೆ ಬರಲಿಲ್ಲ, ಯಾವುದೇ ಆರೈಕೆ ನೀಡಲಿಲ್ಲ ಎಂದು ಮಚೇಂದ್ರ ಆರೋಪಿಸಿದ್ದಾರೆ. ಬಳಿಕ ಸ್ವಗ್ರಾಮ ಚಿಟಗುಪ್ಪಾಕ್ಕೆ ಬಂದಾಗ ಪತ್ನಿ ತವರು ಮನೆಗೆ ತೆರಳಿದ್ದಾಳೆ ಎಂದು ಹೇಳಿದ್ದಾರೆ.
ಈ ಕಾರಣಗಳಿಂದ ಜನವರಿ 2025ರಲ್ಲಿ ವಿಚ್ಛೇದನಕ್ಕಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ನಂತರ ಸೆಟಲ್ಮೆಂಟ್ ಎಂಬ ಹೆಸರಿನಲ್ಲಿ ಕರೆಸಿ ಒಂದು ಕೋಟಿ ರೂ. ಬೇಡಿಕೆ ಇಟ್ಟಿದ್ದು, ಒಪ್ಪದ ಕಾರಣ ಹುಮನಾಬಾದ್ ತಾಲೂಕಾ ಪಂಚಾಯತ್ ಕಚೇರಿ ಬಳಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
2025ರ ಸೆಪ್ಟೆಂಬರ್ನಲ್ಲಿ ಮತ್ತೆ ಹುಮನಾಬಾದ್ನಲ್ಲಿ ಹಲ್ಲೆ ನಡೆದಿದೆ ಎಂದು ಹೇಳಿರುವ ಮಚೇಂದ್ರ, ವರದಕ್ಷಿಣೆ ಡಿಮ್ಯಾಂಡ್, ಮಕ್ಕಳಿಲ್ಲ ಎಂಬ ಕಾರಣಕ್ಕೆ ಕಿರುಕುಳ ನೀಡಿದ್ದೆ ಎಂಬ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಈ ಆರೋಪ–ಪ್ರತ್ಯಾರೋಪಗಳ ನಡುವೆ ಪ್ರಕರಣದ ತನಿಖೆ ಯಾವ ದಿಕ್ಕು ಪಡೆಯಲಿದೆ ಎಂಬುದನ್ನು ಕಾನೂನು ಪ್ರಕ್ರಿಯೆ ನಿರ್ಧರಿಸಬೇಕಿದೆ.



