ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ;
ಪಟ್ಟಣದಲ್ಲಿ ಯುವಕನೋರ್ವನ ಮೇಲೆ ಹಾಡುಹಗಲೇ ಕಾರಿನಲ್ಲಿ ಬಂದ ಯುವಕರ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ. ಈ ಘಟನೆ ಕಣ್ಣಾರೆ ಕಂಡ ಜನ ಬಿಚ್ಚಿ ಬಿದ್ದಿದ್ದು, ಕೆಲಕಾಲ ಆತಂಕದ ವಾತಾವರಣ ಮೂಡಿತ್ತು.
ಪಟ್ಟಣದ ಹುಲಗೇರಿಬಣದ ನೂರಅಹ್ಮದ ಇಮಾಮಸಾಬ ಮಕಾಂದಾರ(೩೬) ಹಲ್ಲೆಗೊಳಗಾದ ಯುವಕ. ನೂರಅಹ್ಮದ ಮಕಾಂದಾರ ಪಟ್ಟಣದ ಸರ್ಕಾರಿ ಪಶು ಆಸತ್ರೆ ಹತ್ತಿರದ ರಸ್ತೆಯಲ್ಲಿ ತನ್ನ ದ್ವಿಚಕ್ರವಾಹದಲ್ಲಿ ಹೊರಟ್ಟಿದ್ದ ವೇಳೆಯಲ್ಲಿ ಕಾರಿನಲ್ಲಿ ಬಂದ ಯುವಕರು ಏಕಾಏಕಿ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ಇದರಿಂದಾಗಿ ಆತ ಸ್ಥಳದಲ್ಲಿಯೇ ಕುಸಿದು ಬಿದ್ದು ಅರಪ್ರಜ್ಞಾವಸ್ಥೆ ತಲುಪಿದ್ದರಿಂದ ಅಲ್ಲಿಂದ ಅವನನ್ನು ಬಿಟ್ಟು ಪರಾರಿಯಾಗಿದ್ದಾರೆ. ಆತನ ಎರಡೂ ಕಾಲುಗಳಿಂದ ನೆತ್ತರು ಹರಿದು ತೀವೃ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೂಡಲೇ ಆತನಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಆಸ್ತಿ ವಿವಾದ ಮತ್ತು ಹಳೆಯ ವೈಷಮ್ಯವೇ ಕಾರಣವೆನ್ನಲಾಗುತ್ತಿದೆ. ಈ ಕುರಿತು ಮಾಹಿತಿ ಪಡೆದಿರುವ ಪಿಎಸ್‌ಐ ಪ್ರಕಾಶ ಡಿ. ಪ್ರಕರಣ ದಾಖಲಿಸಿಕೊಂಡು ಘಟನೆಗೆ ಕಾರಣರಾದವರ ಪತ್ತೆ ಕಾರ್ಯ ಕೈಗೊಂಡಿದ್ದಾರೆ.