ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಲ್ಲಿ ಅಧಿಕಾರಿಗಳು ಮಕ್ಕಳಿಗೆ ನಿರಾಶೆಯಾಗದಂತೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಸಲಹೆ ನೀಡಿದರು.
ಇಲ್ಲಿಯ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿಯು ಸ್ವಾಮಿ ವಿವೇಕಾನಂದರ 144ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ, ಮಹಿಳಾ ಹಾಗೂ ವಿಶೇಷಚೇತನರ ಗ್ರಾಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಕ್ಕಳ ಬೇಡಿಕೆಗಳು ಬಹಳಷ್ಟು ಇರುತ್ತವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು, ಅವರಿಗೆ ನಿರಾಶೆಯಾದರೆ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಹತ್ತರ ಸಾಧನೆ ಮಾಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬೇಕು. ಈ ಪ್ರೌಢಶಾಲೆಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಶಾಸಕರ ಅನುದಾನದಲ್ಲಿ 5 ಲಕ್ಷ ರೂ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ವಿ.ಪ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ಇಂತಹ ಗ್ರಾಮ ಸಭೆಗಳಿಂದ ತಿಳುವಳಿಕೆ ಬರುತ್ತದೆ. ಈ ದಿಸೆಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಅಧಿಕಾರಿಗಳು ಅವರ ಸಮಸ್ಯೆಗೆ ಈ ಸಭೆಯಲ್ಲಿ ಸ್ಪಂದಿಸಬೇಕು ಎಂದರು.
ಬಿ.ಇ.ಒ ವಿ.ವಿ. ನಡುವಿನಮನಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಕಲಿಕೆಗಾಗಿ ಜನಪ್ರತಿನಿಧಿಗಳ ಸಹಾಯ-ಸಹಕಾರದೊಂದಿಗೆ ಮೂಲಭೂತ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಗ್ರಾ.ಪಂ ಅನುದಾನದ ಇತಿಮಿತಿಯಲ್ಲಿ ಗ್ರಾಮದ ಅಭಿವೃದ್ಧಿಯೊಂದಿಗೆ ಮಕ್ಕಳ ಶೈಕ್ಷಣಿಕ ಪರಿಸರ ನಿರ್ಮಿಸಲು ಪ್ರಯತ್ನ ಮಾಡಿದ್ದೇನೆ. ಈವರೆಗೆ ಸಹಕಾರ ನೀಡಿದ ಎಲ್ಲ ಅಧಿಕಾರಿ ವರ್ಗಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ, ಜಿ.ಪಂ ಯೋಜನಾಧಿಕಾರಿ ಎಂ.ವಿ. ಚಳಗೇರಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ, ಸಮಾಜ ಕಲ್ಯಾಣ ಇಲಾಖೆಯ ನಂದಾ ಹಣಬರಟ್ಟಿ, ಗ್ರಾಮೀಣ ಸಿ.ಪಿ.ಐ ಸಿದ್ಧರಾಮೇಶ ಗಡೇದ, ಸಿ.ಡಿ.ಪಿ.ಒ ಮೇಲ್ವಿಚಾರಕಿ ಕಮತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರೂಪಾ ಬೆಟಗೇರಿ, ಪೊಲೀಸ್ ಇಲಾಖೆಯ ಭಾರತಿ ಚಳಗೇರಿ, ವಿಕಲಚೇತನ ಇಲಾಖೆಯ ಖಾಜಾಹುಸೇನ ಕಾತರಕಿ, ಸಖಿ ಒನ್ ಕೇಂದ್ರದ ಸುಜಾತಾ ಶಾಸ್ತ್ರಿಮಠ, ಅಶ್ವಿನಿ ಹಿರೇಮಠ, ಅಂಗನವಾಡಿ ಮೇಲ್ವಿಚಾರಕಿ ಶಾಹಿದಬೇಗಂ ಹತ್ತಿವಾಲೆ, ಕಾರ್ಮಿಕ ಇಲಾಖೆಯ ಶ್ರೀಶೈಲ ಸೋಮನಕಟ್ಟಿ, ವಿದ್ಯಾರ್ಥಿ ಪ್ರತಿನಿಧಿಗಳಾಗಿ ನಂದೀಶ ಕಲಬಂಡಿ, ಪಾರ್ವತಿ ಪಾಟೀಲ, ಗವಿಶಿದ್ದಪ್ಪ ಯಲಿಶಿರುಂಜ, ರಮಾಜಾನ ತಹಸೀಲ್ದಾರ, ಗ್ರಾ.ಪಂ ಸದಸ್ಯರು ವೇದಿಕೆಯಲ್ಲಿದ್ದರು. ಪಿ.ಡಿ.ಒ ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೈ.ವೈ. ಬೆಟಗೇರಿ ನಿರೂಪಿಸಿದರು. ಕಾರ್ಯದರ್ಶಿ ಎಂ.ಎ. ಗಾಜಿ ವಂದಿಸಿದರು.
ಶಾಲಾ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಸಂಚರಿಸುವ ರಸ್ತೆಯಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈಗಾಗಲೇ ನೂರಾರು ಕುಟುಂಬಗಳು ಸರಕಾರದ ಅನುದಾನವನ್ನು ಪಡೆದು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡರೂ ಸಹ ಬಯಲು ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದು, ಅವರಿಗೆ ನೀಡಿದ ಅನುದಾನವನ್ನು ಮರಳಿ ಪಡೆಯಲಾಗುವುದು. ಶಾಲೆ, ಸರಕಾರಿ ಕಾರ್ಯಾಲಯದ ಹತ್ತಿರ ವಾಹನಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವವರಿಗೆ 100 ರೂ ದಂಡ ವಿಧಿಸಲಾಗುವುದು ಎಂದು ಪಿ.ಡಿ.ಒ ಅಮೀರನಾಯಕ ಎಚ್ಚರಿಕೆ ನೀಡಿದರು.
ಬಾಕ್ಸ್
ಮಹಿಳಾ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಖಿ ಒನ್ ಕೇಂದ್ರದ ಅಶ್ವಿನಿ ಶಾಸ್ತ್ರಿಮಠ, ಮಹಿಳೆಯರು ತಮ್ಮ ಶೋಷಣೆ ಮತ್ತು ದೌರ್ಜನ್ಯವನ್ನು ವಿರೋಧಿಸಲು ಕಾನೂನಿನ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು. ಪೊಲೀಸ್ ಇಲಾಖೆಯ ಭಾರತಿ ಚಳಗೇರಿ ಮಾತನಾಡಿ, ಮಹಿಳೆಯರು ತಮ್ಮ ಚಿನ್ನಾಭರಣಗಳನ್ನು ಗದ್ದಲದ ಪ್ರದೇಶದಲ್ಲಿ ಹಾಕಿಕೊಳ್ಳಬೇಡಿ, ಮೊಬೈಲಿನಲ್ಲಿ ತಮ್ಮ ವೈಯಕ್ತಿಕ ಫೋಟೋಗಳನ್ನು ಹಾಕಬೇಡಿ ಎಂದು ಎಚ್ಚರಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಾಹಿದಬೇಗಂ ಹತ್ತಿವಾಲೆ, ಸಿ.ಡಿ.ಪಿ.ಒ ಮೇಲ್ವಿಚಾರಕಿ ಕಮತ ಮಾತನಾಡಿದರು. ಖಾಜಾಹುಸೇನ ಕಾತರಕಿ ವಿಕಲಚೇತನರಿಗೆ ಸರಕಾರದಿಂದ ದೊರೆಯುವ ಸೌಲಭ್ಯದ ಕುರಿತು ವಿವರಿಸಿದರು.



