ವಿಜಯಸಾಕ್ಷಿ ಸುದ್ದಿ, ಧಾರವಾಡ: ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಜಯಂತಿಯನ್ನು ಇಂದು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಅವರ ಜೀವನವು ನಮಗೆ ಪ್ರೇರಣೆಯಾಗಿದೆ. ಅವರು ಸಮಾಜಕ್ಕೆ ಧರ್ಮ, ಸೇವೆ ಮತ್ತು ಶ್ರದ್ಧೆಯ ತತ್ವಗಳನ್ನು ಅರ್ಥಮಾಡಿಸಿದರು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು.
ಅವರು ಬುಧವಾರ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಅವರ ಜೀವನ ಮತ್ತು ಬೋಧನೆಗಳು ನಮಗೆ ಮಾರ್ಗದರ್ಶನವನ್ನು ನೀಡುತ್ತಿವೆ. ಅವರು ತಮ್ಮ ಜೀವನದಲ್ಲಿ ಧರ್ಮ, ಶ್ರದ್ಧೆ ಮತ್ತು ಸೇವೆಯ ಮಹತ್ವವನ್ನು ಪ್ರತಿಪಾದಿಸಿ, ಸಮುದಾಯವನ್ನು ಪ್ರೇರೇಪಿಸಿದ್ದಾರೆ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ರವಿ ಶೇಷಗಿರಿ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹುಬ್ಬಳ್ಳಿ-ಧಾರವಾಡ ನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಂಜುನಾಥ ಎಲ್.ಭೋವಿ, ಪಾಲಿಕೆ ಮಾಜಿ ಸದಸ್ಯ ಬಸವರಾಜ ಹ.ಮುತ್ತಳ್ಳಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಮಹಾನಗರ ಪಾಲಿಕೆ ಸದಸ್ಯ ತುಳಸಪ್ಪ ಪೂಜಾರ ವಂದಿಸಿದರು.
ಸಮಾಜದ ಮುಖಂಡರಾದ ಕಾಶಪ್ಪ ನಾಗಪ್ಪ ಹಿರೇಮನಿ, ಗೋವಿಂದಪ್ಪ ಬಿ.ಬಂಡಿವಡ್ಡರ, ಮಲ್ಲೇಶಿ ಎನ್.ಮುನವಳ್ಳಿ, ಯಲ್ಲಪ್ಪ ಗೋ.ಬಂಡಿವಡ್ಡರ, ಭೀಮಪ್ಪ ಎಫ್.ನೇಮಿಕಲ್, ಮಂಜುನಾಥ ಟಿ.ಹಿರೇಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶಾಕೀರ ಸನದಿ ಮಾತನಾಡಿ, ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಜೀವನವು ನಮಗೆ ನಿಷ್ಠೆ, ಧರ್ಮ ಮತ್ತು ಸೇವೆಯ ಮಹತ್ವವನ್ನು ಕಲಿಸಿದೆ. ಅವರು ತಮ್ಮ ಜ್ಞಾನ ಮತ್ತು ಸಾಧನೆಯ ಮೂಲಕ ಸಮಾಜದಲ್ಲಿ ಅಪಾರ ಬದಲಾವಣೆಗಳನ್ನು ತಂದು, ನಮಗೆ ಪ್ರೇರಣೆ ನೀಡಿದ್ದಾರೆ ಮತ್ತು ಸಿದ್ಧರಾಮೇಶ್ವರರ ಮಾರ್ಗದರ್ಶನವು ನಮಗೆ ಸಾಮಾಜಿಕ ನ್ಯಾಯ, ಪ್ರಗತಿ ಮತ್ತು ಸಹಬಾಳ್ವೆಗೆ ಉತ್ತೇಜನ ನೀಡುತ್ತದೆ ಎಂದು ಹೇಳಿದರು.



