ಶಫಾಲಿ ವರ್ಮಾ ಅವರ ಆಲ್ರೌಂಡರ್ ಆಟ ಹಾಗೂ ಲಿಜೆಲ್ ಲೀ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯುಪಿ ವಾರಿಯರ್ಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇದರೊಂದಿಗೆ ಸತತ ಎರಡು ಸೋಲಿನಿಂದ ಕಂಗಾಲಾಗಿದ್ದ ಡೆಲ್ಲಿ WPLನಲ್ಲಿ ಗೆಲುವಿನ ಖಾತೆ ತೆರೆದಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ತಂಡ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ಗಳನ್ನು ಗಳಿಸಿತು. 155 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 158 ರನ್ಗಳನ್ನು ಮಾಡಿ ಸುಲಭ ಜಯ ಸಾಧಿಸಿತು.
ಗುರಿ ಬೆನ್ನಟ್ಟುವ ವೇಳೆ ಡೆಲ್ಲಿ ಪರ ಲಿಜೆಲ್ ಲೀ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್ಗೆ 94 ರನ್ಗಳ ಅಮೂಲ್ಯ ಜೊತೆಯಾಟ ನೀಡಿದರು. ಲಿಜೆಲ್ ಲೀ 44 ಎಸೆತಗಳಲ್ಲಿ 67 ರನ್ಗಳ ಭರ್ಜರಿ ಇನಿಂಗ್ಸ್ ಆಡಿದರು. ಶಫಾಲಿ ವರ್ಮಾ 32 ಎಸೆತಗಳಲ್ಲಿ 36 ರನ್ ಸೇರಿಸಿದರು. ಲಾರಾ ವೋಲ್ವಾರ್ಡ್ ಔಟಾಗದೇ 24 ಎಸೆತಗಳಲ್ಲಿ 25 ರನ್, ಜೆಮಿಮಾ ರೊಡ್ರಿಗಸ್ 12 ಎಸೆತಗಳಲ್ಲಿ 21 ರನ್ ಗಳಿಸಿ ಗೆಲುವಿಗೆ ಸಹಾಯ ಮಾಡಿದರು. ಯುಪಿ ಪರ ದೀಪ್ತಿ ಶರ್ಮಾ 2 ಹಾಗೂ ಆಶಾ ಸೋಭಾನಾ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಯುಪಿ ವಾರಿಯರ್ಸ್ ಪರ ಹರ್ಲೀನ್ ಡಿಯೋಲ್ 38 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 47 ರನ್ ಗಳಿಸಿದರೆ, ಮೆಗ್ ಲ್ಯಾನಿಂಗ್ 38 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸ್ ಸಹಿತ 54 ರನ್ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಫೋಬೆ ಲಿಚ್ಫೀಲ್ಡ್ 20 ಎಸೆತಗಳಲ್ಲಿ 27 ರನ್, ಶ್ವೇತಾ ಸೆಹ್ರಾವತ್ 12 ಎಸೆತಗಳಲ್ಲಿ 11 ರನ್ ಗಳಿಸಿದರು.
ಡೆಲ್ಲಿ ಪರ ಬೌಲಿಂಗ್ನಲ್ಲಿ ಮರಿಜಾನ್ನೆ ಕಪ್ಪ್ ಹಾಗೂ ಶಫಾಲಿ ವರ್ಮಾ ತಲಾ 2 ವಿಕೆಟ್ ಕಿತ್ತರು. ನಂದಿನಿ ಶರ್ಮಾ, ಸ್ನೇಹ್ ರಾಣಾ ಮತ್ತು ಶ್ರೀ ಚರಣಿ ತಲಾ 1 ವಿಕೆಟ್ ಪಡೆದುಕೊಂಡರು.



