ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ (ಮಿಥುನ್) ಪಾಟೀಲರ ಜನ್ಮದಿನದ ನಿಮಿತ್ತ ಏರ್ಪಡಿಸಿದ್ದ ಪ್ರೋ ಕಬಡ್ಡಿ ವೀಕ್ಷಿಸಲು ನಿರೀಕ್ಷೆಗೂ ಮೀರಿ ಕ್ರೀಡಾಪ್ರೇಮಿಗಳು ಪಾಲ್ಗೊಂಡಿದ್ದರು.
ಕಬಡ್ಡಿ ವೈಭವ ವೀಕ್ಷಿಸಲು ಅನುವಾಗುವಂತೆ 4 ಸಾವಿರ ಜನ ಕುಳಿತು ಪಂದ್ಯಗಳನ್ನು ಆಸ್ವಾದಿಸುವಂತೆ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು. ಆದರೆ, ಜ 13, ಕೊನೆಯ ದಿನ ನಿರೀಕ್ಷೆ ಮೀರಿ ಕ್ರೀಡಾ ಪ್ರೇಮಿಗಳು ಆಗಮಿಸಿದ್ದರಿಂದ ಸಂಘಟಕರು ಜನ ಸಾಗರವನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು.
ಕಬಡ್ಡಿ ಫೈನಲ್ ಪಂದ್ಯದ ನಿಮಿತ್ತ ಮಹಿಳೆಯರ ಕಬಡ್ಡಿ ಪಂದ್ಯಾವಳಿಗಳನ್ನು ವೀಕ್ಷಿಸಲು ಅಂದಾಜು 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾದಂತೆ ಪೊಲೀಸ್ ಭದ್ರತೆಯನ್ನೂ ಹೆಚ್ಚಿಸಲಾಯಿತು. ಶಾಸಕ ಜಿ.ಎಸ್. ಪಾಟೀಲ ಕೂಡ ಕಳೆದ ನಾಲ್ಕು ದಿನಗಳಿಂದ ಮಗನ ಜನ್ಮದಿನದ ನಿಮಿತ್ತ ನಡೆದ ಕಾರ್ಯಕ್ರಮಗಳಿಗೆ ಆಗಮಿಸಿರಲಿಲ್ಲ. ಕೊನೆಯ ದಿನ ರಾತ್ರಿ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಲು ಶಾಸಕರು ಆಗಮಿಸಿದ್ದು ಕಬಡ್ಡಿ ಪಂದ್ಯಾವಳಿಗಳಿಗೆ ಮತ್ತಷ್ಟು ಮೆರುಗು ನೀಡಿತ್ತು.



