ರಾಯಚೂರು: ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಸಮೀಪದ ಕಾಗಿನೆಲೆ ಕನಕಗುರುಪೀಠದ ಪೀಠಾಧಿಪತಿ ಸಿದ್ದರಾಮನಂದ ಸ್ವಾಮೀಜಿ (50) ಅವರು ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಹೃದಯ ಸ್ತಂಭನದಿಂದ ಅಸ್ತಂಗತರಾಗಿದ್ದಾರೆ.
ಇತ್ತೀಚೆಗಷ್ಟೇ ಜ.12, 13 ಹಾಗೂ 14ರಂದು ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮವನ್ನು ಸ್ವಾಮೀಜಿ ಯಶಸ್ವಿಯಾಗಿ ಆಯೋಜಿಸಿದ್ದರು. ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಪೂಜಾರಿಗಳ ಶಿಬಿರ ಭಾರೀ ಜನಮನ್ನಣೆ ಪಡೆದಿತ್ತು. ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪವಿಲ್ಲದೆ ನಡೆದ ಈ ಕಾರ್ಯಕ್ರಮಕ್ಕೆ ವಿವಿಧ ವಲಯಗಳಿಂದ ಪ್ರಶಂಸೆ ವ್ಯಕ್ತವಾಗಿತ್ತು.
ಕಳೆದ ಒಂದು ವಾರದಿಂದ ನಿರಂತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಸ್ವಾಮೀಜಿ ಸರಿಯಾಗಿ ಊಟ ಹಾಗೂ ನಿದ್ರೆ ಮಾಡಲಾಗದೆ ದೌರ್ಬಲ್ಯಕ್ಕೆ ಒಳಗಾಗಿದ್ದರು. ಬುಧವಾರ ರಾತ್ರಿ ಲೋ ಬಿಪಿಯಿಂದ ಬಳಲಿದ ಅವರನ್ನು ತಕ್ಷಣ ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಸಿದ್ದರಾಮನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯವರು. ಮಹದೇವಯ್ಯ–ಜಯಮ್ಮ ದಂಪತಿಯ ಎರಡನೇ ಪುತ್ರರಾಗಿದ್ದ ಅವರ ಮೂಲ ಹೆಸರು ಮೋಹನ್ ಪ್ರದಾನ. 18ನೇ ವಯಸ್ಸಿನಲ್ಲಿ ಮನೆ ತೊರೆದ ಅವರು ಜೈನ, ಕ್ರೈಸ್ತ ಹಾಗೂ ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೂ ಒಳಗಾಗಿದ್ದರು.
ಶರಣ ಸಾಹಿತ್ಯದ ಜೊತೆಗೆ ವಿವಿಧ ಧರ್ಮಗಳ ಅಧ್ಯಯನ ನಡೆಸಿದ ಸ್ವಾಮೀಜಿ ಚಿತ್ರದುರ್ಗದ ಮುರುಘಾಮಠದಲ್ಲಿ ಕೆಲಕಾಲ ವಿದ್ಯಾಭ್ಯಾಸ ಮಾಡಿದ ಬಳಿಕ ನಾಲ್ಕು ವರ್ಷಗಳ ಕಾಲ ಸಿಂಧನೂರಿನಲ್ಲಿ ಸ್ವಾಮೀಜಿಯಾಗಿ ವಾಸ್ತವ್ಯ ಮಾಡಿದರು. ನಂತರ 2011ರಲ್ಲಿ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಬಳಿ ಕಾಗಿನೆಲೆ ಕನಕಗುರುಪೀಠವನ್ನು ಸ್ಥಾಪಿಸಿದರು.
ಕಲಬುರಗಿ ವಿಭಾಗದಾದ್ಯಂತ ಕನಕಗುರುಪೀಠಗಳ ಸ್ಥಾಪನೆಗೆ ಕಾರಣರಾಗಿದ್ದ ಅವರು ಪ್ರತಿ ವರ್ಷ ಜನವರಿ 12, 13, 14ರಂದು ಹಾಲುಮತ ಸಂಸ್ಕೃತಿ ವೈಭವವನ್ನು ಆಯೋಜಿಸುತ್ತಿದ್ದರು. ಶಾಲಾ ಮಕ್ಕಳಿಗೆ ಉಚಿತ ದಾಸೋಹ, ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳ ಮೂಲಕ ಸಮಾಜಸೇವೆಗೆ ಮಹತ್ವದ ಕೊಡುಗೆ ನೀಡಿದ್ದರು. ಜೊತೆಗೆ ಸಾಹಿತ್ಯ ಹಾಗೂ ಸಮಾಜಸೇವೆಯಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಭಾಸ್ಕರ, ಕನಕರತ್ನ ಹಾಗೂ ಸಿದ್ಧಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದ್ದರು. ಸ್ವಾಮೀಜಿಗಳ ನಿಧನದಿಂದ ಹಾಲುಮತ ಸಮುದಾಯ ಹಾಗೂ ಅಪಾರ ಶಿಷ್ಯವೃಂದದಲ್ಲಿ ತೀವ್ರ ಶೋಕದ ಛಾಯೆ ಆವರಿಸಿದೆ.



