ಗದಗ: ಐತಿಹಾಸಿಕ ಹಾಗೂ ಪುರಾತನ ದೇವಾಲಯಗಳಿಗಾಗಿ ಪ್ರಸಿದ್ಧಿಯಾಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ, ಇತ್ತೀಚೆಗೆ ನಿಧಿ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ರಿತ್ತಿ ಕುಟುಂಬದ ಮನೆಯಲ್ಲಿ ನಿಧಿ ಪತ್ತೆಯಾದ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಗ್ರಾಮದಲ್ಲಿರುವ ಎಲ್ಲಾ ಪುರಾತನ ದೇವಾಲಯಗಳತ್ತ ನಿಧಿಗಳ್ಳರ ಗಮನ ಹರಿದಿದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ.
ಈ ಹಿಂದೆ ಲಕ್ಕುಂಡಿ ಹೊರವಲಯದ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ನಿಧಿಗಳ್ಳರು ಬಸವಣ್ಣನ ಮೂರ್ತಿಯ ಪಕ್ಕದಲ್ಲೇ ಸುಮಾರು ಆರು ರಿಂದ ಏಳು ಅಡಿ ಆಳದವರೆಗೆ ಅಗೆದು ನಿಧಿ ಹುಡುಕಲು ಯತ್ನಿಸಿದ್ದ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ನಿಂಬೆಹಣ್ಣು ಸೇರಿದಂತೆ ಮಾಟ-ಮಂತ್ರಕ್ಕೆ ಬಳಸುವ ವಸ್ತುಗಳನ್ನು ದೇವಸ್ಥಾನ ಆವರಣದಲ್ಲಿ ಬಳಕೆ ಮಾಡಿದ ಗುರುತುಗಳು ಪತ್ತೆಯಾಗಿದ್ದವು. ಈ ದೇವಸ್ಥಾನದಲ್ಲೇ ಎರಡು–ಮೂರು ಬಾರಿ ಇಂತಹ ಘಟನೆಗಳು ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದರು.
ಲಕ್ಕುಂಡಿಯಲ್ಲಿ “ಎಲ್ಲಿ ಅಗೆದರೂ ಚಿನ್ನ ಸಿಗುತ್ತದೆ” ಎಂಬ ಜನಪ್ರಚಲಿತ ನಂಬಿಕೆ, ನಿಧಿಗಳ್ಳರ ಚಟುವಟಿಕೆಗೆ ಇಂಧನವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ದೇವಾಲಯಗಳಲ್ಲಿ ಯಥೇಚ್ಛ ನಿಧಿ ಅಡಗಿದೆ ಎಂಬ ಭ್ರಮೆಯಿಂದ, ಶತಮಾನಗಳ ಪುರಾತನ ಸ್ಮಾರಕಗಳು ಅಪಾಯಕ್ಕೆ ಒಳಗಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ, ಪುರಾತನ ದೇವಾಲಯಗಳ ರಕ್ಷಣೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದು, ಇತಿಹಾಸವನ್ನು ಉಳಿಸಬೇಕಾದ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



