ಬಳ್ಳಾರಿ: ಜನಾರ್ದನ ರೆಡ್ಡಿ ಮನೆ ಮುಂದೆ ನಡೆದ ಬ್ಯಾನರ್ ಗಲಭೆ ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಕಲೆ ಹಾಕಿರುವ ಸಿಐಡಿ ತಂಡ, ಇದೀಗ ಸಾರ್ವಜನಿಕರಿಂದಲೂ ವಿಡಿಯೋ ಹಾಗೂ ಫೋಟೋ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದೆ. ಗಲಭೆಯ ಸಂದರ್ಭದಲ್ಲಿನ ವಿಡಿಯೋಗಳನ್ನು ಹೊಂದಿರುವವರು ಸಿಐಡಿಗೆ ಕಳುಹಿಸುವಂತೆ ಮನವಿ ಮಾಡಲಾಗಿದೆ.
ಸಿಐಡಿ ತಂಡವು ವಾಟ್ಸಪ್ ನಂಬರ್ ಒದಗಿಸಿದ್ದು, ಆ ಮೂಲಕ ವಿಡಿಯೋ ತುಣುಕುಗಳನ್ನು ಕಳುಹಿಸಬಹುದು. ವಿಡಿಯೋ ಕಳುಹಿಸುವವರ ಗೌಪ್ಯತೆಯನ್ನು ಸಂಪೂರ್ಣವಾಗಿ ಕಾಪಾಡಲಾಗುವುದು ಎಂದು ಸಿಐಡಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಗಲಭೆ ಮತ್ತು ಕೊಲೆ ಪ್ರಕರಣವು ರಾಜ್ಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ, ತನಿಖೆ ಪ್ರಕ್ರಿಯೆಗೆ ವೇಗ ನೀಡಲಾಗಿದೆ.



