ದಳಪತಿ ವಿಜಯ್ ಅಭಿಮಾನಿಗಳು ಕಾದು ಕುಳಿತಿದ್ದ ‘ಜನ ನಾಯಗನ್’ ಸಿನಿಮಾ ಸದ್ಯಕ್ಕೆ ಬಿಡುಗಡೆಯ ಕನಸೇ ದೂರವಾಗುತ್ತಿದೆ. ಜನವರಿ 09ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ, ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡದೇ ಇರುವ ಕಾರಣದಿಂದಾಗಿ ಥಿಯೇಟರ್‌ಗಳಿಗೆ ಬರಲೇ ಇಲ್ಲ.
ಈ ವಿಚಾರದಿಂದ ಕೋಪಗೊಂಡ ನಿರ್ಮಾಪಕರು ನೇರವಾಗಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ಆರಂಭದಲ್ಲಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ನೀಡಿದ್ದು ವಿಜಯ್ ಅಭಿಮಾನಿಗಳಿಗೆ ಸ್ವಲ್ಪ ನಿಟ್ಟುಸಿರು ಕೊಟ್ಟಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಹೈಕೋರ್ಟ್ ತನ್ನದೇ ಆದೇಶಕ್ಕೆ ತಡೆ ನೀಡಿದ್ದು, ಚಿತ್ರತಂಡಕ್ಕೆ ದೊಡ್ಡ ಶಾಕ್ ನೀಡಿತು.
ಇದರಿಂದ ಬೇಸತ್ತ ತಂಡ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಶೀಘ್ರವಾಗಿ ಪ್ರಮಾಣ ಪತ್ರ ಕೊಡಿಸುವಂತೆ ಮನವಿ ಮಾಡಿದರೂ, ಸುಪ್ರೀಂಕೋರ್ಟ್ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ನಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚಿಸಿದೆ. ಅಲ್ಲದೆ, ಈ ಅರ್ಜಿಯ ವಿಚಾರಣೆಯ ಬಗ್ಗೆ ನ್ಯಾಯಾಲಯಕ್ಕೆ ಆಸಕ್ತಿ ಇಲ್ಲ ಎಂಬ ಸ್ಪಷ್ಟ ಸಂದೇಶವೂ ನೀಡಲಾಗಿದೆ.
ಇದರಿಂದ ‘ಜನ ನಾಯಗನ್’ ಪ್ರಕರಣ ಮತ್ತೆ ಮದ್ರಾಸ್ ಹೈಕೋರ್ಟ್‌ಗೆ ವಾಪಸ್ ಬಂದು ತಲುಪಿದೆ. ಈಗಾಗಲೇ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜನವರಿ 23ಕ್ಕೆ ನಿಗದಿಪಡಿಸಿದ್ದು, ಆ ದಿನ ಕೂಡ ಸ್ಪಷ್ಟ ಆದೇಶ ಹೊರಬರುವ ಬಗ್ಗೆ ಅನುಮಾನ ಮುಂದುವರಿದಿದೆ.
ಇದಕ್ಕಿಂತ ದೊಡ್ಡ ಆತಂಕ ಎಂದರೆ, ಇನ್ನೇನು ಕೆಲವೇ ತಿಂಗಳಲ್ಲಿ ತಮಿಳುನಾಡಿನಲ್ಲಿ ಚುನಾವಣಾ ಘೋಷಣೆ ಸಾಧ್ಯತೆ ಇದೆ. ಒಂದೊಮ್ಮೆ ಚುನಾವಣೆ ಘೋಷಣೆ ಆದರೆ, ಸ್ವತಃ ಸ್ಪರ್ಧಿ ಆಗಿರುವ ವಿಜಯ್ ಅವರ ಸಿನಿಮಾ ‘ಜನ ನಾಯಗನ್’ ಬಿಡುಗಡೆ ಆಗದೇ ಹೋಗುವ ಸಾಧ್ಯತೆ ಹೆಚ್ಚಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಜಯ್ ಅಭಿಮಾನಿಗಳಲ್ಲಿ ಅನುಮಾನ ಬಲವಾಗಿ ಕೇಳಿಬರುತ್ತಿದೆ. “ಸಿನಿಮಾ ಬಿಡುಗಡೆ ತಡೆಯಲು ಉದ್ದೇಶಿತ ಪಿತೂರಿ ನಡೆಯುತ್ತಿದೆ” ಎಂಬ ಆರೋಪಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.



