ಗದಗ: ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮಣ್ಣಿನೊಳಗಿರುವ ಇತಿಹಾಸ ಹೊರತೆಗೆದ ಕಾರ್ಯಕ್ಕೆ ಅಧಿಕೃತ ಚಾಲನೆ ದೊರೆತಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದ ಸಿದ್ಧರಕೊಳ್ಳ ಪ್ರದೇಶದಲ್ಲಿ ಇಂದಿನಿಂದ ಉತ್ಖನನ ಆರಂಭವಾಗಿದ್ದು, ಸುಮಾರು 10 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಲಕ್ಕುಂಡಿ ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಸೇರಿದಂತೆ ಅನೇಕ ರಾಜ ವಂಶಗಳ ಆಡಳಿತಕ್ಕೆ ಒಳಪಟ್ಟಿದ್ದು, ಶಾಸನಗಳ ಪ್ರಕಾರ ಬಾದಾಮಿಗಿಂತಲೂ ಹೆಚ್ಚು ಐತಿಹಾಸಿಕ ಮಹತ್ವ ಹೊಂದಿದೆ. ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಅಪಾರ ಪ್ರಮಾಣದ ಇತಿಹಾಸ ಬೆಳಕಿಗೆ ಬರಲಿದೆ ಎಂಬ ವಿಶ್ವಾಸ ಪುರಾತತ್ವ ತಜ್ಞರಲ್ಲಿ ಇದೆ.
ದೇವಾಲಯದ 50 ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ನಾಣ್ಯಗಳನ್ನು ತಯಾರಿಸುತ್ತಿದ್ದ ಟಂಕಸಾಲೆಗಳ ಕುರುಹುಗಳು, ನಾಣ್ಯಗಾರರ ಕುಟುಂಬಗಳ ಗುರುತುಗಳು, ಅಕ್ಕಸಾಲಿಗರ ಮನೆತನದ ಅವಶೇಷಗಳು ಪತ್ತೆಯಾಗಿವೆ. ಹಿಂದಿನ ಉತ್ಖನನ ಸಂದರ್ಭಗಳಲ್ಲಿ ವಜ್ರ, ವೈಡೂರ್ಯ, ಮುತ್ತು, ರತ್ನ, ಆಭರಣಗಳು ದೊರೆತಿರುವುದು ಈ ಪ್ರದೇಶದ ಸಂಪದ್ಭರಿತ ಇತಿಹಾಸವನ್ನು ಸಾಬೀತುಪಡಿಸುತ್ತದೆ.
101 ದೇವಸ್ಥಾನಗಳು ಮತ್ತು 101 ಬಾವಿಗಳನ್ನು ಹೊಂದಿರುವ ಪವಿತ್ರ ಲಕ್ಕುಂಡಿ ಮುಂದಿನ ದಿನಗಳಲ್ಲಿ ಇನ್ನೂ ಹಲವು ಉತ್ಖನನ ಪ್ರದೇಶಗಳಿಗೆ ಸಾಕ್ಷಿಯಾಗಲಿದೆ. ಅಧಿಕಾರಿಗಳು ಈಗಾಗಲೇ ಸ್ಥಳ ಗುರುತಿಸಿ ಅಳತೆ ಕಾರ್ಯ ಆರಂಭಿಸಿದ್ದು, ಶೀಘ್ರದಲ್ಲೇ ಇತರ ಪ್ರದೇಶಗಳಲ್ಲಿಯೂ ಕಾರ್ಯಾಚರಣೆ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಜನರ ನಿರೀಕ್ಷೆ ಮತ್ತು ಕುತೂಹಲ ಸಂಪೂರ್ಣವಾಗಿ ಲಕ್ಕುಂಡಿಯತ್ತ ಕೇಂದ್ರೀಕೃತವಾಗಿದೆ.



