ಬೆಂಗಳೂರು: ಶುಚಿತ್ವದ ಕೊರತೆ, ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ, ಅಗತ್ಯ ಸುರಕ್ಷತಾ ವ್ಯವಸ್ಥೆಗಳು ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸದ ಪೇಯಿಂಗ್ ಗೆಸ್ಟ್ (PG) ವಸತಿಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ ನಿಯಮ ಉಲ್ಲಂಘನೆ ಮಾಡಿದ ಪಿಜಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರ ನಿರ್ದೇಶನದ ಮೇರೆಗೆ ಒಟ್ಟು 204 ಪೇಯಿಂಗ್ ಗೆಸ್ಟ್ ವಸತಿ ಗೃಹಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಗಂಭೀರ ಲೋಪಗಳು ಪತ್ತೆಯಾದ ಹಿನ್ನೆಲೆ 6 ಪಿಜಿಗಳಿಗೆ ಬೀಗ ಜಡಿಸಲಾಗಿದ್ದು, ಒಟ್ಟು ₹1.96 ಲಕ್ಷ ದಂಡ ವಿಧಿಸಲಾಗಿದೆ. ಪರಿಶೀಲನೆ ವೇಳೆ ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆಯ ನೈರ್ಮಲ್ಯ, ಸುರಕ್ಷತಾ ವ್ಯವಸ್ಥೆಗಳು, ಸಮರ್ಪಕ ಶೌಚಾಲಯ, ಅಗ್ನಿಶಾಮಕ ಸಾಧನಗಳು, ಸಿಸಿಟಿವಿ ಕ್ಯಾಮರಾ ಅಳವಡಿಕೆ ಹಾಗೂ FSSAI ಆಹಾರ ಸುರಕ್ಷತಾ ಪ್ರಮಾಣ ಪತ್ರ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ತಪಾಸಣೆ ನಡೆಸಲಾಯಿತು.
ನಿಯಮಗಳಲ್ಲಿ ನ್ಯೂನತೆ ಕಂಡುಬಂದ ಪಿಜಿ ಮಾಲೀಕರಿಗೆ 7 ದಿನಗಳೊಳಗೆ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಕಾರ್ಯನಿರ್ವಹಿಸುವಂತೆ ತಿಳುವಳಿಕೆ ಪತ್ರ ನೀಡಲಾಗಿದೆ. ಈ ಸಂದರ್ಭ ಚಿಕ್ಕಪೇಟೆ ಮತ್ತು ಶಿವಾಜಿನಗರದ ಆರೋಗ್ಯ ವೈದ್ಯಾಧಿಕಾರಿಗಳು ಹಾಜರಿದ್ದರು. ಬೆಂಗಳೂರು ನಗರದಲ್ಲಿ ಜೆಂಟ್ಸ್ ಹಾಗೂ ಗರ್ಲ್ಸ್ ಪಿಜಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಬರುವ ಸಾವಿರಾರು ಜನರು ಪಿಜಿಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಜನಸಂಖ್ಯೆ ಹೆಚ್ಚಿದಂತೆ ಕಟ್ಟಡ ನಿಯಮಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಪಿಜಿಗಳನ್ನು ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಅಧಿಕೃತ ಪಿಜಿಗಳಿಗಿಂತ ಅನಧಿಕೃತ ಪಿಜಿಗಳೇ ಹೆಚ್ಚಿರುವುದು ಅಧಿಕಾರಿಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.



