ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಹಿಂದೂ ಸಮ್ಮೇಳನ ಸಮಿತಿಯಿಂದ ಜ. 18ರಂದು ಭಾನುವಾರ ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಮತ್ತು ಬೃಹತ್ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಹಿಂದೂ ಬಾಂಧವರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕೆಂದು ಹಿಂದೂ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಬಸವರಾಜ ಬೆಂಡಿಗೇರಿ ಮನವಿ ಮಾಡಿದರು.
ಅವರು ಶುಕ್ರವಾರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ ಹಿಂದೂ ಧರ್ಮದ ಜಾಗೃತಿ, ರಕ್ಷಣೆ ಮತ್ತು ಧರ್ಮದ ತತ್ವ ಸಿದ್ಧಾಂತ, ಸಂಸ್ಕೃತಿ, ಪರಂಪರೆ, ಮೌಲ್ಯಗಳು ಯುವಕರಲ್ಲಿ ಬಿತ್ತುವ, ಆ ಮೂಲಕ ನಾವೆಲ್ಲ ಒಂದು-ಹಿಂದೂ ಎಂಬ ಸಾಮರಸ್ಯದ ಭಾವನೆ ಮೂಡಿಸುವುದು ಸಮ್ಮೇಳನದ ಉದ್ದೇಶವಾಗಿದೆ.
ಸಮ್ಮೇಳನದ ನಿಮಿತ್ತ ಅಂದು ಮಧ್ಯಾಹ್ನ 3.30ಕ್ಕೆ ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ಸಕಲ ವಾದ್ಯಮೇಳ, ಪೂರ್ಣಕುಂಭ, ಭಾರತ ಮಾತೆ ಸೇರಿ ವಿವಿಧ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾತ್ಮರ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಮಾರ್ಗದಲ್ಲಿ ಭವ್ಯ ಶೋಭಾ ಯಾತ್ರೆ ನಡೆಯಲಿದೆ. ಬಳಿಕ ಸಂಜೆ 5ಕ್ಕೆ ಶ್ರೀ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಹಿಂದೂ ಸಮ್ಮೇಳನ-ಧರ್ಮ ಜಾಗೃತಿ ಸಭೆ ನಡೆಯಲಿದೆ. ಗದಗನ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸಾನ್ನಿಧ್ಯ ವಹಿಸುವರು. ಹಿಂದೂ ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಚಂದ್ರಣ್ಣ ಮಹಾಜನಶೆಟ್ಟರ ಅಧ್ಯಕ್ಷತೆ ವಹಿಸುವರು. ಹಿಂದೂ ಸಂಘಟನೆಯ ಪ್ರಮುಖ ಗೋವಿಂದಪ್ಪ ಗೌಡಪ್ಪಗೋಳ ದಿಕ್ಸೂಚಿ ಭಾಷಣ ಮಾಡುವರು. ಬೆಳಿಗ್ಗೆ ಪಟ್ಟಣದ ಬಸ್ತಿಬಣದಿಂದ ಹಿಂದೂಪರ ಸಂಘಟನೆಗಳ ಯುವಕರಿಂದ ಬೈಕ್ ರ‍್ಯಾಲಿ ನಡೆಯಲಿದೆ ಎಂದರು.
ಸಭೆಯಲ್ಲಿ ಸಮಿತಿಯ ಪ್ರಮುಖರಾದ ಬಸವೇಶ ಮಹಾಂತಶೆಟ್ಟರ, ಗುರುರಾಜ ಪಾಟೀಲ ಕುಲಕರ್ಣಿ, ಸುನೀಲ ಮಹಾಂತಶೆಟ್ಟರ, ಚಂದ್ರು ಹಂಪಣ್ಣವರ, ಸೋಮೇಶ ಉಪನಾಳ, ವೈ.ಕೆ. ಲಿಂಗಶೆಟ್ಟಿ, ಚಿಕ್ಕರಸ ಪೂಜಾರ, ಗಜಾನನ ಹೆಗಡೆ, ಅನಿಲ ಮುಳಗುಂದ, ಸಂತೋಷ ಜಾವೂರ, ಬಸವಣ್ಣೆಪ್ಪ ನಂದೆಣ್ಣವರ, ಬಾಳಪ್ಪ ಗೋಸಾವಿ, ಬಂಗಾರೆಪ್ಪ ಮುಳಗುಂದ, ಗಂಗಾಧರ ಮೆಣಸಿನಕಾಯಿ, ಮಂಜು ಹೊಗೆಸೊಪ್ಪಿನ, ಪ್ರವೀಣ ಬೋಮಲೆ, ವಿಜಯ ಕುಂಬಾರ, ವಿರೇಶ ಸಾಲಸವಾಡ, ಶಂಕರ ಬ್ಯಾಡಗಿ, ಪ್ರಶಾಂತ ಮೆಡ್ಲೇರಿ, ನವೀನ ಹಿರೇಮಠ, ಈರಣ್ಣ ಮುಳಗುಂದ, ರವಿ ಕಲ್ಲೂರ, ಸುರೇಶ ಕುರ್ಡೇಕರ ಮುಂತಾದವರಿದ್ದರು.
ಸಂಘಟನಾ ಪ್ರಮುಖರಾದ ರಾಮರಾವ್ ವೆರ್ಣೇಕರ ಮಾತನಾಡಿ, ಹಿಂದೂ ಸಮ್ಮೇಳನದ ಯಶಸ್ವಿಗಾಗಿ ಈಗಾಗಲೇ ಹತ್ತಾರು ಗ್ರಾಮಗಳು, ವಿವಿಧ ಧರ್ಮ ಸಮಾಜಗಳ ಪ್ರಮುಖರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದೆ. ಎಲ್ಲರೂ ಅತ್ಯಂತ ಆಸಕ್ತಿ ಮತ್ತು ಸ್ವಯಂ ಪ್ರೇರಣೆಯಿಂದ ಭಾಗವಹಿಸಲಿದ್ದಾರೆ. ಶೋಭಾಯಾತ್ರೆ ಸಂಚರಿಸುವ ಮಾರ್ಗ ಅಲಂಕರಿಸಲಾಗುವುದು. ಸಮ್ಮೇಳನದ ಯಶಸ್ಸಿಗಾಗಿ ಪೂರಕ ಸಿದ್ಧತೆ ಮಾಡಿಕೊಳ್ಳಲಾಗಿದೆ. 8ರಿಂದ 10 ಸಾವಿರ ಹಿಂದೂ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.



