ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಪಂ. ಭೀಮಸೇನ ಜೋಷಿ ರಂಗಮಂದಿರದಲ್ಲಿ ಎಚ್.ಕೆ. ಪಾಟೀಲ ಪ್ರತಿಷ್ಠಾನ ಹಾಗೂ ಜಿಎನ್‌ಟಿಟಿಎಫ್, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗಣಿತ ಬಾಲಭಾಸ್ಕರ ತಾಲೂಕು ಮಟ್ಟದ ಪರೀಕ್ಷೆಯ ಉದ್ಘಾಟನಾ ಕಾರ್ಯಕ್ರಮ ಜ. 17ರಂದು ಬೆಳಿಗ್ಗೆ 9.30ಕ್ಕೆ ಜರುಗಲಿದೆ ಎಂದು ಜಿ.ಎನ್.ಟಿ.ಟಿ.ಎಫ್ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗಣಿತ ಬಾಲಭಾಸ್ಕರ ತಾಲೂಕು ಮಟ್ಟದ ಪರೀಕ್ಷೆ ಕಾರ್ಯಕ್ರಮವನ್ನು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು.
ಗಣಿತದ ಮೂಲ ಬೇರುಗಳು ಭಾರತದಲ್ಲಿಯೇ ಜನಿಸಿದ್ದು, ಆರ್ಯಭಟ, ಭಾಸ್ಕರರಂತಹ ಗಣಿತ ಪಂಡಿತರ ಜನ್ಮಭೂಮಿಯೂ ಭಾರತವಾಗಿದೆ. ಇಂತಹ ಗಣಿತ ಕೌಶಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಎಚ್.ಕೆ. ಪಾಟೀಲ ಪ್ರತಿಷ್ಠಾನ ಹಾಗೂ ಜಿ.ಎನ್.ಟಿ.ಟಿ.ಎಫ್, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಳೆದ ಜ. 10ರಂದು ಗದಗ ತಾಲೂಕಾ ಶಹರ ಮತ್ತು ಗ್ರಾಮೀಣ ಭಾಗದ 140 ಶಾಲೆಗಳ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಬಾಲಭಾಸ್ಕರ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪರೀಕ್ಷೆಯಲ್ಲಿ ಸುಮಾರು 13 ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಅದರಲ್ಲಿ ಸುಮಾರು 1,500ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಜ. 17ರಂದು ಜಿ.ಎನ್.ಟಿ.ಟಿ.ಎಫ್. ಕ್ಯಾಂಪಸ್‌ನಲ್ಲಿ ನಡೆಯುವ ಎರಡನೇ ಹಂತದ ತಾಲೂಕಾ ಮಟ್ಟದ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಜ. 17ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ 8ನೇ ತರಗತಿ ಹಾಗೂ ಮಧ್ಯಾಹ್ನ 12ರಿಂದ 1ರವರೆಗೆ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು. ಜ. 24ರಂದು ಜಿ.ಎನ್.ಟಿ.ಟಿ.ಎಫ್ ಕ್ಯಾಂಪಸ್‌ನಲ್ಲಿ ಫೈನಲ್ ಪರೀಕ್ಷೆ ನಡೆಯುವುದು. ಈ ಕಾರ್ಯಕ್ರಮಕ್ಕೆ ಗದಗ ತಾಲೂಕಿನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಟಗೇರಿ ಬಸ್ ನಿಲ್ದಾಣದಿಂದ ಗದಗ ಹಳೇ ಬಸ್ ನಿಲ್ದಾಣ ಹಾಗೂ ಮುಳಗುಂದ ನಾಕಾದಿಂದ ಜಿ.ಎನ್.ಟಿ.ಟಿ.ಎಫ್ ಕ್ಯಾಂಪಸ್‌ಗೆ ಬರಲು ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.
ಪರೀಕ್ಷಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಜಿ.ಎನ್.ಟಿ.ಟಿ.ಎಫ್ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ತಿಳಿಸಿದ್ದಾರೆ.



