ಬಾಲಿವುಡ್‌ಗೆ ಎವರ್‌ಗ್ರೀನ್ ಸಂಗೀತ ಕೊಟ್ಟ ದಿಗ್ಗಜ, ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಇದೀಗ ಬಾಲಿವುಡ್ ವ್ಯವಸ್ಥೆಯ ವಿರುದ್ಧವೇ ಗಂಭೀರ ಪ್ರಶ್ನೆ ಎತ್ತಿದ್ದಾರೆ. ಬಿಬಿಸಿ ಏಷ್ಯನ್ ನೆಟ್ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ, “ಕಳೆದ 8 ವರ್ಷಗಳಿಂದ ಬಾಲಿವುಡ್‌ನಲ್ಲಿ ನನಗೆ ಅವಕಾಶಗಳೇ ಸಿಗುತ್ತಿಲ್ಲ. ಇದಕ್ಕೆ ಕೋಮುವಾದಿ ಮನಸ್ಥಿತಿಯೂ ಕಾರಣವಾಗಿರಬಹುದು” ಎಂದು ಹೇಳಿರುವುದು ಹೊಸ ವಿವಾದಕ್ಕೆ ಇಂಧನ ಹಾಕಿದೆ.
ನಾನು ಯಾರ ಬಳಿಯೂ ಕೆಲಸಕ್ಕಾಗಿ ಹೋಗಲ್ಲ. ನನ್ನನ್ನು ಹುಡುಕಿ ಬರುವ ಕೆಲಸವನ್ನಷ್ಟೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿರುವ ರೆಹಮಾನ್, 90ರ ದಶಕದಲ್ಲಿ ಇಂತಹ ಪಕ್ಷಪಾತ ಇರಲಿಲ್ಲ ಎಂದು ನೆನಪಿಸಿದ್ದಾರೆ. ಈಗ ಸಂಗೀತ ಕಂಪನಿಗಳು ತಮಗೆ ಅವಕಾಶ ನೀಡದೆ, ಐವರು ಸಂಗೀತ ನಿರ್ದೇಶಕರ ಜೊತೆ ಒಪ್ಪಂದ ಮಾಡಿಕೊಂಡಿರುವುದು ನೋವು ತಂದಿದೆ ಎಂದಿದ್ದಾರೆ.
“ಕಳೆದ 8 ವರ್ಷಗಳಲ್ಲಿ ಅಧಿಕಾರ ಬದಲಾವಣೆ ಆಯ್ತು. ಈಗ ಸೃಜನಶೀಲತೆ ಇಲ್ಲದವರು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದು ಮತೀಯವಾದವೂ ಇರಬಹುದು” ಎಂಬ ರೆಹಮಾನ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ‘ರೋಜಾ’, ‘ಬಾಂಬೆ’, ‘ದಿಲ್ ಸೆ’, ‘ತಾಲ್’ ಮುಂತಾದ ಐತಿಹಾಸಿಕ ಸಿನಿಮಾಗಳಿಗೆ ಸಂಗೀತ ನೀಡಿದರೂ ಕೂಡ, ಇಂದು ಬಾಲಿವುಡ್‌ನಲ್ಲಿ ನಾನು ಇನ್ನೂ ಹೊರಗಿನವನಂತೆ ಕಾಣುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಪರಿಸ್ಥಿತಿ ಇಳಯರಾಜಾ ಅವರಿಗೂ ಎದುರಾಗಿದೆ ಎಂದು ಹೇಳಿದ್ದಾರೆ.
ಇನ್ನೊಂದು ಕಡೆ, ಯಶ್ ಮತ್ತು ರಣಬೀರ್ ಕಪೂರ್ ನಟನೆಯ ಮೆಗಾ ಪ್ರಾಜೆಕ್ಟ್ ‘ರಾಮಾಯಣ’ ಸಿನಿಮಾಗೆ ರೆಹಮಾನ್ ಸಂಗೀತ ನೀಡುತ್ತಿರುವುದು ವಿಶೇಷ. “ನಿಮ್ಮ ಹೆಸರು ಮುಸ್ಲಿಂ, ರಾಮಾಯಣಕ್ಕೆ ಮ್ಯೂಸಿಕ್ ಮಾಡಿದರೆ ವಿರೋಧ ಬರಲ್ವಾ?” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೆಹಮಾನ್, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ, ಮಹಾಭಾರತ ಕಥೆಗಳು ನನಗೆ ತುಂಬಾ ಚೆನ್ನಾಗಿ ಗೊತ್ತು. ಅವು ಮಾನವೀಯ ಮೌಲ್ಯಗಳಿಂದ ತುಂಬಿವೆ. ನಾನು ಎಲ್ಲ ಧರ್ಮಗಳ ಒಳ್ಳೇತನವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.



