ಬೆಂಗಳೂರು: ಹಿಂದೂ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ವಲಸಿಗರಿಗೆ ಬೆದರಿಕೆ ಹಾಗೂ ಭೀತಿ ಉಂಟು ಮಾಡಿದ ಆರೋಪದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಬನ್ನೇರುಘಟ್ಟ ಹಾಗೂ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಅವರ ಬೆಂಬಲಿಗರು ಬಾಂಗ್ಲಾದೇಶ ಮೂಲದ ವಲಸಿಗರ ಮನೆಗಳಿಗೆ ನುಗ್ಗಿ, ಪೌರತ್ವ ಮತ್ತು ಗುರುತಿನ ದಾಖಲೆಗಳನ್ನು ಕೇಳಿದ್ದಾಗಿ ಆರೋಪಿಸಲಾಗಿದೆ. ಈ ವೇಳೆ ಕೆಲವರು ತಾವು ಬಾಂಗ್ಲಾದೇಶದವರು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಬಾಂಗ್ಲಾದೇಶ ಮೂಲದವರಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ದೊರೆತಿರುವುದು ಹಾಗೂ ಕೆಲವರಿಗೆ ಬ್ಯಾಂಕ್ ಸಾಲವೂ ಮಂಜೂರಾಗಿದೆ. ದಾಖಲೆಗಳಿಲ್ಲದೆ ಈ ಎಲ್ಲ ಸೌಲಭ್ಯಗಳು ಹೇಗೆ ದೊರಕಿವೆ ಎಂದು ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಪ್ರಕರಣದಲ್ಲಿ ವಲಸಿಗರಿಗೆ ಭೀತಿ ಉಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣೆಯ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ. ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಪುನೀತ್ ಕೆರೆಹಳ್ಳಿ ಬೆಂಬಲಿಗರು ಪೊಲೀಸ್ ಠಾಣೆಯ ಬಳಿ ಜಮಾಯಿಸಿ, ಸರ್ಕಾರ ವಿರೋಧಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.



