ಧಾರವಾಡ: ಜಿಲ್ಲೆಯ ಅಮಿನಭಾವಿ ಗ್ರಾಮದಲ್ಲಿ ನಡೆದ ಮನೆ ತೆರವು ಕಾರ್ಯಾಚರಣೆ ಇದೀಗ ಜಿಲ್ಲಾಡಳಿತದ ವಿರುದ್ಧ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಬಡವರಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆಯುತ್ತಿರುವ ನಡುವೆಯೇ, ಜೆಸಿಬಿ ಕಾರ್ಯಾಚರಣೆ ನಡೆಸಿ ಮನೆಗಳನ್ನು ನೆಲಸಮ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಧಾರವಾಡ ತಾಲೂಕಿನ ಅಮಿನಭಾವಿ ಗ್ರಾಮದ ಗುಡ್ಡ ಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ 450ಕ್ಕೂ ಹೆಚ್ಚು ಬಡ ಕುಟುಂಬಗಳು ಅಕ್ರಮವಾಗಿ ವಾಸಿಸುತ್ತಿವೆ. ಈ ಜಾಗವನ್ನು ಮೊದಲು ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ಗುತ್ತಿಗೆ ನೀಡಿದ್ದು, ನಂತರ ಮರುಸ್ವಾಧೀನ ಪಡೆದುಕೊಂಡಿದೆ. ಇದೇ ಜಾಗದಲ್ಲಿ ವಾಸವಿರುವ ಜನರಿಗೆ ಅಲ್ಲೇ ಹಕ್ಕುಪತ್ರ ನೀಡಲು ಜಿಲ್ಲಾಡಳಿತ ಮೂರು ತಿಂಗಳಿಂದ ಪಟ್ಟಿ ತಯಾರಿಸುತ್ತಿತ್ತು.
ಆದರೆ ಈ ವಿಚಾರ ತಿಳಿದ ಕೆಲವರು ಅವಕಾಶ ದುರುಪಯೋಗ ಮಾಡಿಕೊಂಡು ರಾತ್ರೋರಾತ್ರಿ ಹೊಸ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಹಿನ್ನೆಲೆ ಕಂದಾಯ ಇಲಾಖೆ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ಕೈಗೊಂಡಿದೆ. ಆದರೆ ಈ ವೇಳೆ ಹೊಸ ಮನೆಗಳ ಜೊತೆಗೆ 20ಕ್ಕೂ ಹೆಚ್ಚು ಹಳೆಯ ಮನೆಗಳೂ ಧ್ವಂಸಗೊಂಡಿವೆ.
ಮನೆ ಕಳೆದುಕೊಂಡ ಬಡ ಜನರು “ನಮಗೆ ಮುಂಚಿತವಾಗಿ ಮಾಹಿತಿ ನೀಡಿದರೆ ನಾವು ಸ್ವಯಂವಾಗಿ ಮನೆ ತೆರವು ಮಾಡುತ್ತಿದ್ದೆವು. ಈಗ ಮಕ್ಕಳೊಂದಿಗೆ ನಾವು ಎಲ್ಲಿ ಹೋಗಬೇಕು?” ಎಂದು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಗುಡ್ಡದ ಮೇಲೆ ಇದ್ದ ಮೈಲಾರ ದೇವರ ದೇವಸ್ಥಾನವನ್ನೂ ಜೆಸಿಬಿಯಿಂದ ತೆರವು ಮಾಡಲಾಗಿದೆ ಎಂಬ ಆರೋಪ ಜನರ ನೋವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲೆಯಲ್ಲಿ 7,500ಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಮನೆ ಕಟ್ಟಿಕೊಂಡವರ ಮನೆಗಳನ್ನು ಮಾತ್ರ ತೆರವು ಮಾಡಲಾಗಿದೆ ಎಂದ ಅವರು, ಹಿಂದಿನಿಂದಲೂ ವಾಸವಿದ್ದವರ ಮನೆ ತೆರವಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಬಡವರಿಗೆ ಸೂರು ಕಲ್ಪಿಸಬೇಕಾದ ಪ್ರಕ್ರಿಯೆಯಲ್ಲೇ, ಅವರೇ ಬೀದಿಗೆ ಬೀಳುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತದ ಮುಂದಿನ ನಿರ್ಧಾರ ಇದೀಗ ಸಾವಿರಾರು ಜನರ ಬದುಕನ್ನು ನಿರ್ಧರಿಸಲಿದೆ.



