ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾನೂನು ಎನ್ನುವುದು ಜನಸಾಮಾನ್ಯರಿಂದ ಹಿಡಿದು ಎಲ್ಲರಿಗೂ ಒಂದೇ ಆಗಿದ್ದು, ಕಾನೂನು ತಿಳುವಳಿಕೆ ಇಲ್ಲದೆ ಅನೇಕ ಘಟನೆಗಳು ನಡೆದು ಶಿಕ್ಷೆ ಅನುಭವಿಸುವಂತಾಗುತ್ತದೆ. ಬೀದಿ ಬದಿ ವ್ಯಾಪಾರಸ್ಥರು ಕಾನೂನಿನ ಬಗ್ಗೆ ಅರಿವನ್ನು ಹೊಂದುವುದು ಅವಶ್ಯವಾಗಿದೆ ಎಂದು ದಿವಾಣಿ ನ್ಯಾಯಾಧೀಶ ಸತೀಶ ಎಂ ತಿಳಿಸಿದರು.
ಅವರು ಶನಿವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆ ಡೇ ನಲ್ಮ ಕಾರ್ಯಕ್ರಮದಡಿಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಬೆಂಗಳೂರು, ಜಿಲ್ಲಾ ಆಡಳಿತ ಗದಗ, ಪುರಸಭೆ ಲಕ್ಷ್ಮೇಶ್ವರ ಇವರ ಸಹಯೋಗದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರು ಸಾರ್ವಜನಿಕರಿಗೆ ತೊಂದರೆ ಆಗದಂತೆ ತಮ್ಮ ವ್ಯಾಪಾರ-ವಹಿವಾಟು ಮಾಡಿಕೊಳ್ಳಬೇಕು. ಪುರಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಕಮಿಟಿ ಮಾಡಲಾಗಿರುತ್ತದೆ. ಅದರಲ್ಲಿ ಆರೋಗ್ಯ ಇಲಾಖೆ, ಸರಕಾರದಿಂದ ನಾಮ ನಿರ್ದೇಶನ ಸದಸ್ಯರು ಇರುತ್ತಾರೆ. ಅದಲ್ಲದೆ ಸ್ಥಳೀಯ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಒಂದು ಕಮಿಟಿಯೂ ಇರುತ್ತದೆ. ಅಲ್ಲಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದು, ಉಚಿತ ಕಾನೂನು ಸೇವಾ ಪ್ರಾಧಿಕಾರದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. 5 ವರ್ಷಕ್ಕೊಮ್ಮೆ ಬೀದಿ ಬದಿ ವ್ಯಾಪಾರಸ್ಥರಿಗೆಂದೇ ಕ್ರಿಯಾಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಿದರೆ ಅಲ್ಲಿಂದ ಅನುದಾನ ಪಡೆದುಕೊಳ್ಳಬಹುದು. ಐ.ಡಿ ಕಾರ್ಡ್, ಲೈಸೆನ್ಸ್ ಹೊಂದಿದ್ದರೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಎಂದ ಅವರು, ಬೀದಿ ಬದಿ ವ್ಯಾಪಾರಸ್ಥರು ದಿನನಿತ್ಯದಲ್ಲಿ ಬರುವ ಸಮಸ್ಯೆಗಳ ಬಗ್ಗೆ ಕಾನೂನಿನ ಸಾಮಾನ್ಯ ಜ್ಞಾನವನ್ನು ಹೊಂದಿದ್ದರೆ ಅಹಿತಕರ ಘಟನೆಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟಿವ್ಹಿಸಿ ಕಾರ್ಯದರ್ಶಿ ಹಾಗೂ ಸಮುದಾಯ ಸಂಘಟನಾ ಅಧಿಕಾರಿ ಶೋಭಾ ಬೆಳ್ಳಿಕೊಪ್ಪ, ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ, ನ್ಯಾಯಾಂಗ ಇಲಾಖೆಯ ದಿನೇಶ ಎಸ್.ಕೆ, ಪೊಲೀಸ್ ಇಲಾಖೆಯ ಸಂತೋಷ ಸಾತಪುತೆ, ಪುರಸಭೆ ಸಿಬ್ಬಂದಿ ಹನುಮಂತಪ್ಪ ನಂದೆಣ್ಣವರ, ಸಿಆರ್‌ಪಿಗಳಾದ ಲಕ್ಷ್ಮೀ ಓದು, ಇಂದಿರಾ ಸವಣೂರ ಮುಂತಾದವರಿದ್ದರು.
ವಕೀಲ ಪ್ರಕಾಶ ವಾಲಿ ಮಾತನಾಡಿ, ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರು ಕಾನೂನುಗಳನ್ನು ತಿಳಿದುಕೊಳ್ಳಬೇಕು. ಪುರಸಭೆ ಗುರುತಿಸಿದ ಜಾಗದಲ್ಲಿ ಬಿಟ್ಟು, ಬೇರೆ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ. ಐ.ಡಿ ಕಾರ್ಡ್ ಹಾಕಿಕೊಂಡು ವ್ಯಾಪಾರ ಮಾಡಬೇಕು. ತಮ್ಮ ವ್ಯಾಪಾರದಲ್ಲಿ ಚಿಕ್ಕಮಕ್ಕಳನ್ನು ಬಳಸಿಕೊಳ್ಳುವುದು ಸಹ ಕಾನೂನಿನ ಪ್ರಕಾರ ಅಪರಾಧವಾಗಿದೆ. ಅಲ್ಲದೆ ಆಹಾರ ಪದಾರ್ಥಗಳನ್ನು ಮಾರುವವರು ಅದರ ಗುಣಮಟ್ಟ, ಸ್ವಚ್ಛತೆ ಇತ್ಯಾದಿಗಳ ಬಗ್ಗೆ ಕಾಳಜಿ ವಹಿಸಬೇಕು. ಕಾನೂನು ಮೀರಿ ಯಾರೂ ವರ್ತಿಸಬಾರದು ಎಂದು ಹೇಳಿದರು.



