ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಶ್ವರವಾದ ಮನುಷ್ಯ ಜೀವನದ ಮುಖ್ಯ ಉದ್ದೇಶ ಸ್ವಾರ್ಥರಹಿತವಾದ ಪರಹಿತ ಚಿಂತನೆ ಹಾಗೂ ಪರೋಪಕಾರದಿಂದ ಜೀವನ ಸಾರ್ಥಕತೆ ಹೊಂದುತ್ತದೆ ಎಂದು ಶಿರಹಟ್ಟಿಯ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಹೇಳಿದರು.
ಅವರು ಶುಕ್ರವಾರ ಹೂವಿನಶಿಗ್ಲಿ ಮಠದ ಜಾತ್ರಾ ಮಹೋತ್ಸವ ಹಾಗೂ ಲಿಂ. ನಿರಂಜನ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಅಂಗವಾಗಿ ನಡೆದ `ಮಹಾತ್ಮರ ಬದುಕು-ಬೆಳಕು’ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸೇವಾಹೀ ಪರಮೋ ಧರ್ಮ ಎನ್ನುವಂತೆ ನಿಸ್ವಾರ್ಥ ಸೇವೆ ಬದುಕಿನ ಅಂಗವಾದಾಗ ಶ್ರೇಷ್ಠ ಬದುಕು ನಮ್ಮದಾಗುತ್ತದೆ. ಸಮಾಜ ನಮಗೇನು ನೀಡಿದೆ ಎಂಬ ಪ್ರಶ್ನೆಗಿಂತ ಸಮಾಜಕ್ಕೆ ನಾವೇನು ಕೊಡುಗೆ ಕೊಟ್ಟಿದ್ದೇವೆ ಎಂಬ ಆತ್ಮವಿಮರ್ಶೆ ನಮ್ಮದಾಗಬೇಕು. ಪುಣ್ಯದ ಕೆಲಸ ಮಾಡಿವರು ಪುಣ್ಯಾತ್ಮರು, ಮಹಾತ್ಮರು ಆಗಿ ಅಳಿದ ನಂತರವೂ ಜನಮಾನಸದಲ್ಲಿ ಪರಮಾತ್ಮರಾಗಿ ಉಳಿಯುತ್ತಾರೆ. ಪಾಪಿಗಳು ಈ ಲೋಕದಿಂದ ಕಣ್ಮರೆಯಾಗುತ್ತಾರೆ. ಈ ಪುಣ್ಯ ಭೂಮಿಗೆ ನಾವು ಏನೂ ನೀಡುತ್ತೇವೆಯೋ ಅದನ್ನೇ ಮತ್ತೆ ಪಡೆಯುತ್ತೇವೆ. ಅದು ಉಪಕಾರ, ಸ್ನೇಹ, ಪ್ರೀತಿ, ಅನುಕಂಪ ಏನೇ ಒಳ್ಳೆಯದ್ದಾಗಿರಲಿ ಯಾವುದೇ ರೂಪದಲ್ಲಿ ಸತ್ಫಲವನ್ನೇ ನೀಡುತ್ತದೆ.
ನಮ್ಮ ಬದುಕಿನ ರೀತಿಯಿಂದ ಬದುಕು ಅರ್ಥಪೂರ್ಣವಾಗುತ್ತದೆ. ಸಮಾಜಕ್ಕೆ ನಮ್ಮ ನೆಲದ ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿ, ಧರ್ಮ ಮಾರ್ಗ ಮತ್ತು ಮಠಮಾನ್ಯಗಳ ಸತ್ಸಂಗದೊಂದಿಗೆ ಸಾತ್ವಿಕ ಜೀವನಕ್ಕೆ ಒಗ್ಗಿಕೊಳ್ಳಬೇಕು. ಹೂವಿನಶಿಗ್ಲಿಯ ಲಿಂ. ನಿರಂಜನ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಚನ್ನವೀರ ಸ್ವಾಮಿಗಳು ಸಮಾಜಮುಖಿ ಕಾರ್ಯದಲ್ಲಿ ಹೆಸರಾಗಿದ್ದು, ಭಕ್ತರು ಅವರ ಕಾರ್ಯಕ್ಕೆ ಸಹಾಯ-ಸಹಕಾರ ನೀಡಬೇಕೆಂದರು ಎಂದರು.
ಹಿರೇಮಾಗಡಿಯ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು, ಕುಂದಗೋಳದ ಬಸವಣ್ಣಜ್ಜನವರು, ರಾಚೋಟೇಶ್ವರ ದೇವರು ಉಪಸ್ಥಿತರಿದ್ದರು. ಶ್ರೀಮಠದ ತ್ರಿವಿಧ ದಾಸೋಹ ಸೇವೆಗೆ ಭಕ್ತಿಕಾಣಿಕೆ ಸಮರ್ಪಿಸಿದ ಸೋನಾಳದ ಲೊಕೇಶ ಹಣಮಶೆಟ್ಟಿ, ಶರಣು ಅಂಗಡಿ, ಮಂಜುನಾಥ ಮಾಗಡಿ ಸೇರಿ ಗಣ್ಯಮಾನ್ಯರು ಉಪಸ್ಥಿತರಿದ್ದರು. ಕೊತಬಾಳದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.



