ಬೆಂಗಳೂರು: CL-7 ಲೈಸೆನ್ಸ್ ಮಾಡಿಸಿಕೊಡುವುದಾಗಿ ಹೇಳಿ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಡೆಪ್ಯೂಟಿ ಕಮಿಷನರ್ (ಡಿಸಿ), ಎಸ್ಪಿ ಹಾಗೂ ಕಾನ್ಸ್ಟೇಬಲ್ ಸೇರಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರ್ಟ್ ಆದೇಶಿಸಿದೆ.
ಬಂಧಿತರನ್ನು ಅಬಕಾರಿ ಡಿಸಿ ಜಗದೀಶ್, ಎಸ್ಪಿ ತಮ್ಮಣ್ಣ ಹಾಗೂ ಕಾನ್ಸ್ಟೇಬಲ್ ಲಕ್ಕಪ್ಪ ಗಣಿಗೆ ಎಂದು ಗುರುತಿಸಲಾಗಿದೆ. ಸಿಎಲ್-7 ಮದ್ಯ ಪರವಾನಗಿ ಮಾಡಿಸಿಕೊಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಇವರ ಮೇಲಿದೆ.
ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ತಡರಾತ್ರಿವರೆಗೂ ವಿಚಾರಣೆ ನಡೆಸಿ, ಲಂಚ ಪಡೆದಿರುವುದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮತ್ತು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಎಲ್ಲಾ ದಾಖಲೆಗಳೊಂದಿಗೆ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ನ್ಯಾಯಾಲಯ, ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನೆ ಮಾಡಲು ಆದೇಶಿಸಿದೆ.
CL-7 ಲೈಸೆನ್ಸ್ ಎಂದರೆ ಕರ್ನಾಟಕದಲ್ಲಿ ಹೋಟೆಲ್ ಹಾಗೂ ವಸತಿ ಗೃಹಗಳಿಗೆ ಅಬಕಾರಿ ಇಲಾಖೆಯಿಂದ ನೀಡಲಾಗುವ ಮದ್ಯ ಮಾರಾಟ ಪರವಾನಗಿ. ಈ ಪರವಾನಗಿ ಹೊಂದಿರುವ ಹೋಟೆಲ್ಗಳಿಗೆ ಮಾತ್ರ ಮದ್ಯ ಮಾರಾಟ ಮಾಡಲು ಕಾನೂನಾತ್ಮಕ ಅನುಮತಿ ಇರುತ್ತದೆ.



