ಅಸ್ಸಾಂ: ಬಿಜೆಪಿ ದೇಶದ ಜನರ ಮೊದಲ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷವು ತನ್ನ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಸ್ಸಾಂನ ಕಲಿಯಾಬೋರ್‌ನಲ್ಲಿ 6,957 ಕೋಟಿ ರೂ. ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ಎರಡು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ನಕಾರಾತ್ಮಕ ರಾಜಕೀಯವನ್ನು ದೇಶದ ಜನರು ಸಂಪೂರ್ಣವಾಗಿ ತಿರಸ್ಕರಿಸುತ್ತಿದ್ದಾರೆ ಎಂದರು. ಮುಂಬೈನಲ್ಲಿ ಕಾಂಗ್ರೆಸ್ ಈಗ ನಾಲ್ಕನೇ ಅಥವಾ ಐದನೇ ಸ್ಥಾನಕ್ಕೆ ಕುಸಿದಿದೆ. ವರ್ಷಗಳ ಆಡಳಿತದ ನಂತರವೂ ಮಹಾರಾಷ್ಟ್ರವನ್ನು ಕಾಂಗ್ರೆಸ್ ಹಾಳು ಮಾಡಿದೆ. ಯಾವುದೇ ಅಭಿವೃದ್ಧಿ ದೃಷ್ಟಿಕೋನವಿಲ್ಲದ ಕಾಂಗ್ರೆಸ್ ಅಸ್ಸಾಂಗೆ ಅಥವಾ ಕಾಜಿರಂಗಕ್ಕೆ ಒಳಿತನ್ನು ತರಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಕಳೆದ ಒಂದೂವರೆ ವರ್ಷಗಳಲ್ಲಿ ಬಿಜೆಪಿಯ ಮೇಲಿನ ಜನರ ವಿಶ್ವಾಸ ನಿರಂತರವಾಗಿ ಹೆಚ್ಚಾಗಿದೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಚುನಾವಣೆಯಲ್ಲಿ, 20 ವರ್ಷಗಳ ನಂತರವೂ ಜನರು ಬಿಜೆಪಿಗೆ ದಾಖಲೆಯ ಮತಗಳನ್ನು ನೀಡಿದ್ದು, ಪಕ್ಷ ದಾಖಲೆಯ ಸ್ಥಾನಗಳನ್ನು ಗಳಿಸಿದೆ ಎಂದು ಮೋದಿ ಹೇಳಿದರು.
ಕಾಜಿರಂಗ ಅಸ್ಸಾಂನ ಆತ್ಮವಾಗಿದ್ದು, ಕೇವಲ ರಾಷ್ಟ್ರೀಯ ಉದ್ಯಾನವಲ್ಲ ಎಂದು ಪ್ರಧಾನಿ ಹೇಳಿದರು. ಇದು ಭಾರತದ ಜೀವವೈವಿಧ್ಯದ ಅಮೂಲ್ಯ ಸಂಪತ್ತಾಗಿದ್ದು, ಯುನೆಸ್ಕೋ ವಿಶ್ವ ಪರಂಪರಾ ತಾಣವಾಗಿ ಗುರುತಿಸಿದೆ. ಬೋಡೋ ಸಮುದಾಯದ ಯುವತಿಯರು ಬಾಗೂರುಂಬಾ ನೃತ್ಯದ ಮೂಲಕ ಹೊಸ ದಾಖಲೆ ನಿರ್ಮಿಸಿದ್ದು, 10,000ಕ್ಕೂ ಹೆಚ್ಚು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.



