ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿದ ದುರ್ಘಟನೆ ಭಟ್ಕಳ ತಾಲ್ಲೂಕಿನ ವೆಂಕಟಾಪುರದ ಬಳಿ ನಡೆದಿದೆ.
ಮೃತರನ್ನು ಭಟ್ಕಳದ ಆಜಾದ್ ನಗರ ನಿವಾಸಿ ಮೊಹಮ್ಮದ್ ಅಶ್ರಫ್ ರುಕ್ನುದ್ದೀನ್ ಶಿಪಾಯಿ ಅವರ ಪುತ್ರರಾದ ಬಿಲಾಲ್ (15) ಹಾಗೂ ಆಯಾನ್ (20) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಬಿಲಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಕಾರು ಚಾಲನೆ ಮಾಡುತ್ತಿದ್ದ ಆಯಾನ್ ಗಂಭೀರವಾಗಿ ಗಾಯಗೊಂಡಿದ್ದರು.
ಅವರನ್ನು ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಆಯಾನ್ ಸಾವನ್ನಪ್ಪಿದ್ದಾರೆ.ಶಿರಾಲಿಯಿಂದ ಭಟ್ಕಳದ ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಕುರಿತು ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



